Friday, March 26, 2010

'ಪ್ರೀತಿ' ನೀ ಹೀಗೇಕೆ?


"ಪ್ರೀತಿ ಎಂಬುದು ಬಿಗಿ ಮುಷ್ಟಿಯಲ್ಲಿ ಹಿಡಿದ ಮರಳಿನಂತಾಗಬಾರದು, ಹಿಡಿತ ಬಲವಾದಂತೆ ಮುಷ್ಟಿಯಲ್ಲಿ ಶೂನ್ಯ ಆವರಿಸುತ್ತದೆ.ಪ್ರೇಮಕ್ಕೆ ಮೃದುತ್ವ, ಸ್ವಾತಂತ್ರ್ಯ ಅಗತ್ಯ. ಇಲ್ಲದಿದ್ದರೆ ಅದು ಸಾಯುತ್ತದೆ" ಎಂದೆಯಲ್ಲಾ ಗೆಳೆಯಾ? ನನಗೆ ಪ್ರೀತಿಸುವ ಹೃದಯವಿಲ್ಲ, ಪ್ರೇಮವೆಂದರೆ ಏನೆಂದು ತಿಳಿದಿಲ್ಲ ಅಂದುಕೊಂಡುಯಾ?ನನ್ನೊಲವು ನಿನಗೆ ಬಂಧನವಾಯಿತೇ?"ನೀನು ನನಗೋಸ್ಕರ" ಎಂಬ ನನ್ನ ಪ್ರೀತಿ ತುಂಬಿದ ಸ್ವಾರ್ಥ ಭಾವವೇ ನಿನ್ನ ಸ್ವಾತಂತ್ರ್ಯಕ್ಕೆ ಅಡ್ಡಿಯಾಯಿತೇ?

ಪ್ರೀತಿಯ ಇನ್ನೊಂದು ಮುಖವೇ ಸ್ವಾರ್ಥ ಕಣೋ.ಸ್ವಾರ್ಥವಿಲ್ಲದ ಪ್ರೀತಿ ದೇವರದು ಮಾತ್ರ, ನಾ ನಿನಗೆ ದೇವತೆಯಾಗಲಾರೆ. ನಾ ನಿನಗೆ ಅಸಾಮಾನ್ಯ ಪ್ರೀತಿ ನೀಡಲಾರೆ.ಆದರೆ ಸಾಮಾನ್ಯತೆಯಲ್ಲಿ ಪ್ರೇಮದ ಪರಿಪೂರ್ಣತೆಯನ್ನು ತೋರಿಸಬಲ್ಲೆ.ಇದು ನನ್ನ ಪ್ರೀತಿ ಶಕ್ತಿ ಮೇಲಿರುವ ಅಪೂರ್ವ ನಂಬಿಕೆ.ಆದರೆ ನಿನ್ನ ಆ ಮಾತುಗಳು ನನ್ನ ಬಲವನ್ನೇ ಕಸಿದಿದೆಯಲ್ಲಾ?ಇದಕ್ಕೆ ನೀನೊಬ್ಬನೇ ಉತ್ತರವಾಗಬಲ್ಲೆ.

"ಪ್ರೀತಿ ಮಧುರ ತ್ಯಾಗ ಅಮರ" ನಿಜ.ಆದರೆ ತ್ಯಾಗವೇ ಪ್ರೀತಿಯಲ್ಲ.ಅದು ಕೇವಲ ಭ್ರಮೆ.ನಂಬಿದ ಪ್ರೀತಿಯನ್ನೇ ತ್ಯಾಗ ಮಾಡಬೇಕಾದರೆ ಯಾಕೆ ಪ್ರೀತಿಸಬೇಕು?ನಿಷ್ಕಲ್ಮಶ ಭಾವದೆಡೆಯಿಂದೆದ್ದ ಸಣ್ಣ ಸ್ವಾರ್ಥ ಭಾವವೇ ಪ್ರೀತಿ. ಇಂಥ ನನ್ನ ಪ್ರೀತಿಯೇ ನಿನಗೆ ಮುಳುವಾಯಿತೆಂದರೆ........ ನಾನೇನು ಮಾಡಲಿ? ನನಗೀಗ ಗೋಚರಿಸುತ್ತಿರುವುದು ತ್ಯಾಗವೂ ಅಲ್ಲ ಪ್ರೀತಿಯೂ ಅಲ್ಲ, ಕೇವಲ ಶೂನ್ಯ.............ಅರ್ಥ ಮಾಡಿಕೊಳ್ಳುವಿಯೆಂಬ ಭಾವ ಮಾತ್ರ ಈಗ ನನ್ನೊಂದಿಗೆ ಉಳಿದಿರುವುದು.

Thursday, March 11, 2010

ಸಂಬಂಧಗಳ ಸಂಕೋಲೆಯೊಳಗೆ..............


ಈ ಸಂಬಂಧಗಳೇ ಹೀಗೆ; ದ್ಚಂದ್ವಕ್ಕೀಡು ಮಾಡುತ್ತವೆ. ಕೆಲವೊಮ್ಮೆ ಅತಿಯಾಗಿ ನೆಚ್ಚುವಂತೆ ಮಾಡಿದರೆ, ಮತ್ತೆ ಕೆಲವೊಮ್ಮೆ ನಂಬಿಕೆಯನ್ನೇ ಅಡಿಮೇಲು ಮಾಡುತ್ತದೆ.ಪ್ರತಿಯೊಂದು ಬಂಧವೂ ಅಷ್ಟೇ; ನೀರ ಮೇಲಿನ ಗುಳ್ಳೆಯಂತೆ.ಯಾವಾಗ ಒಡೆದು ಹೋಗುವುದೋ ತಿಳಿಯುವುದಿಲ್ಲ. ಆಧುನಿಕತೆಯ ಪ್ರಭಾವವೋ ಏನೋ ಸಂಬಂಧಗಳು ಬಂಧ ಕಳೆದುಕೊಳ್ಳುತ್ತಾ ಸಾಗುತ್ತಿವೆ.

ಹಿಂದೆ ಹೀಗಿರಲಿಲ್ಲ. 'ಮನೆ 'ಎಂಬುದು ಸಂಬಂಧಗಳ ಸಂಕೋಲೆಯಿಂದ ಘಟ್ಟಿಯಾಗಿತ್ತು. ಸ್ನೇಹಿತರು ಅರ್ಥೈಸುವಿಕೆಯ ಮೂಲಕ ಪರಸ್ಪರ ಗಾಢರಾಗುತ್ತಿದ್ದರು. ಸಹೋದರತೆ ಸಹಕಾರದಿಂದ ಬಲವಾಗುತ್ತಿತ್ತು.ಇಂದು ಕಾಲ ಬದಲಾಗಿದೆ. ಜೊತೆಗೆ ಸಂಬಂಧಗಳ ಬಾಳ್ವಿಕೆಯೂ .ಮಕ್ಕಳು ಅಪ್ಪ ಅಮ್ಮನಿಗಿಂತಲೂ ಅಜ್ಜ-ಅಜ್ಜಿಯನ್ನು ನೆಚ್ಚಿಕೊಂಡಿದ್ದ ಕಾಲವೊಂದಿತ್ತು. ಕಥೆ ಹೇಳಲು, ಉಪ್ಪು ಮೂಟೆ ಮಾಡಲು, ಆಡಲು ಹೆಚ್ಚೇಕೆ ಜೊತೆಗೆ ಮಲಗಲೂ ತಾತನೇ ಬೇಕಾಗಿತ್ತು.

ವಿಪರ್ಯಾಸ ನೋಡಿ. ಇಂದು ಅವಿಭಕ್ತ ಕುಟುಂಬಗಳು ಒಡೆದು 'ಚೊಕ್ಕ ಕುಟುಂಬ'ದ ನೆವದಿಂದ ಚಿಕ್ಕದಾಗಿವೆ. ಅಮ್ಮ ದುಡಿಯಲು ಹೋದರೆ ಅಪ್ಪ ಆಫೀಸಿನಲ್ಲಿ ಬ್ಯುಸಿ. ಮಕ್ಕಳು ಮಾತ್ರ ಅನಾಥರು. ಅವರನ್ನು ನೋಡಿಕೊಳ್ಳಲು ಆಯಾಗಳಿಗೆ ಸಂಬಳ ಬೇಡವೇ? ಜೊತೆಗೆ 'ಸೆಕ್ಯುರಿಟಿ' ಪ್ರಶ್ನೆ ಬೇರೆ. ಆಗ ನೆನಪಾಗುವುದು ವಯಸ್ಸಾದ ಅಜ್ಜ-ಅಜ್ಜಿ. ಹೀಗೆ ಪ್ರತಿಯೊಂದು ಸಂಬಂಧದಲ್ಲೂ ಬಿರುಕು ಬಿಡುತ್ತಾ ಸಾಗಿದರೆ....? ಯಾಂತ್ರಿಕ ಮಾನವ ರೋಬೋಟ್ ಆಗುವುದರಲ್ಲಿ ಸಂಶಯವಿಲ್ಲ.

ಈ ಬಂಧಗಳು 'ಪ್ರಾಫಿಟ್ ಓರಿಯೆಂಟೆಡ್' ಆಗುತ್ತಾ ಸಾಗುತ್ತಿವೆ.ಲಾಭವಿದ್ದರೆ ಮಾತ್ರ ಸಂಬಂಧಗಳು ಉಂಟಾಗುತ್ತಿವೆ; ಮುಂದುವರಿಯುತ್ತದೆ. ಸ್ವಾರ್ಥವಿಲ್ಲದ ಸ್ನೇಹ ಸಂಬಂಧದಲ್ಲೂ ಪ್ರೆಸ್ಟೀಜ್, ಲಾಭದ ಪ್ರಶ್ನೆ ತಲೆಯೆತ್ತಿದೆಯೆಂದರೆ ಉಳಿದ ಸಂಬಂಧಗಳ ಗತಿ ಏನಾಗಬೇಕು? ಪ್ರತಿಯೊಂದು ಸಂಬಂಧವೂ ನಂಬಿಕೆಯ ಬಲವಾದ ತಳಹದಿಯ ಮೇಲೆ ನಿಂತಿರುತ್ತದೆ. ನಂಬಿಕೆಯೇ ಇಲ್ಲದಿದ್ದರೆ......? ಅಲ್ಲಿಗೆ ಒಂದು ಸಂಬಂಧದ ಕೊಲೆಯಾಗುವುದು ಖಂಡಿತ. ಎಲ್ಲರೂ ಸ್ವಾರ್ಥಿಗಳಾಗುತ್ತಿದ್ದಾರೆ .'ನಾನು- ನನ್ನತನ' ಎನ್ನುವುದು 'ನಾವು' ಎಂಬ ಭಾವವನ್ನು ಸಾಯಿಸುತ್ತಿದೆ.ಭಾವನೆಗಳೇ ಇಲ್ಲದೆ ನಿರ್ಜಿವ ಶವದಂತೆ ಬದುಕುತ್ತಿದ್ದೇವೆ.ಭಾವಲೋಕದಿಂದ ಶೂನ್ಯಲೋಕಕ್ಕೆ ನಮ್ಮನ್ನು ನಾವೇ ಅರ್ಪಿಸಿಕೊಲ್ಲುತ್ತಿದ್ದೇವೆ. ಪರಿಚಿತರಾದರೂ ಅಪರಿಚಿತತೆಯ ಸೋಗಿನಲ್ಲಿ ಬಾಳುತ್ತಿದ್ದೇವೆ.ಪಟ್ಟಣಗಳಲ್ಲಂತೂ ಬಿಡಿ. ಪಕ್ಕದ ಮನೆಯವರೇ ಯಾರೆಂದು ಅರಿಯದ ಸ್ಥಿತಿ. ನಾಲ್ಕು ಗೋಡೆಗಳ ನಡುವಿನ ಜೀವನ. ಸಮಾಜದಲ್ಲಿ ಬೆರೆಯಲೂ ಭಯ. ಯಾರಾದರೂ ಏನಂದಾರೋ ಎಂಬ ಭಾವ. ಹೀಗೇ ಮುಂದುವರಿದರೆ ಭಾರತೀಯ ಸಂಸ್ಕ್ರತಿ ಮಾಯವಾಗಿ ಪಾಶ್ಚಾತ್ಯತೆ ನಮ್ಮನ್ನು ಆವರಿಸುವುದರಲ್ಲಿ ಸಂಶಯವಿಲ್ಲ. ಮುಂದೊಂದು ದಿನ ಮಗುವೇ ಹೆತ್ತಮ್ಮನನ್ನು ಯಾರೆಂದು ಕೇಳುವ ಸಂದರ್ಭ ಬಂದರೆ ಅಚ್ಚರಿ ಪಡಬೇಕಾಗಿಲ್ಲ.

ಸಂಬಂಧಗಳ ಬಂಧದಲ್ಲಿ ಒಂದಾದರೆ ನಷ್ಟವೇನು? ಸಂಬಂಧ ಬಂಧಿಸುತ್ತದೆ........... ಪ್ರೀತಿಯಿಂದ....... ಮಧುರಬಾವದಿಂದ..........ಪ್ರತಿಯೊಬ್ಬರನ್ನೂ...............

Tuesday, March 9, 2010

ಪ್ರೀತಿಯಲಿ ಹೀಗೇಕೆ?


ಇಂದ್ಯಾಕೋ ಬೆಳ್ಳಂಗೆಳಗ್ಗೆಯೇ ನಿನ್ನ ನೆನಪು ಒತ್ತರಿಸಿಕೊಂಡು ಬರುತ್ತಿದೆ.Justify Full ಕಾರಣ ನೆನ್ನೆ ರಾತ್ರಿಯ ಜಗಳದ ಗುಂಗು. ಅದೆಷ್ಟು ಬಾರಿ ನಿನ್ನೊಂದಿಗೆ ಜಗಳ ಆಡ್ತೀನೋ ನಂಗೊತ್ತಿಲ್ಲ. ಆದರೆ ಈ ಸಣ್ಣಪುಟ್ಟ ಕದನವೇ ನನ್ನನ್ನು ನಿನ್ನ ಸನಿಹಕ್ಕೆಳೆಯುತ್ತಿದೆ. ಈ ಪ್ರಪಂಚವನ್ನೆ ಸುಟ್ಟು ಹಾಕುವಷ್ಟು ಸಿಟ್ಟು ಬರ್ತಿದೆ.ಯಾಕ್ ಗೊತ್ತಾ?ನಮ್ಮಿಬ್ಬರ ನಡುವೆ ಅಂತರ ಉಂಟು ಮಾಡಿದ್ಯಲ್ಲಾ ಅದಕ್ಕೆ.

ನೀನು ನಿನ್ನ ಕೆಲಸದೊಳಗೆ ಮುಳುಗಿ ಹೋಗಿದ್ರೆ, ನಾನು ನನ್ನ ಓದಿನಲ್ಲಿ ತೇಲಾಡ್ತಾ ಇದೀನಿ;ಮುಳುಗೋಕೆ ಆಗದೆ. ನಿನ್ ಪ್ರೀತಿನೇ ಬಿಡ್ತಾ ಇಲ್ವೋ....ಅದಕ್ಕೆ ಈ ದ್ವಂದ್ವ.ಅದೆಷ್ಟೋ ಬಾರಿ ಅಂದ್ಕೊಂಡಿದಿನಿ ನಿನ್ ಥರಾನೇ ನಾನೂ ಎಲ್ಲವನ್ನು, ಎಲ್ಲರನ್ನೂ ಮರೆತು ನನ್ನಲ್ಲೇ ನಾ ಮುಳಗಿ ಬಿಡಬೇಕೂಂತ.ಆದರೆ ನಿನ್ನ ನಿಷ್ಕಲ್ಮಷ ಅಡೆಯಿಲ್ಲದ ಒಲವೇ ಇದಕ್ಕೆ ತಡೆಗೋಡೆ.
ಇಷ್ಟೆಲ್ಲಾ ಜಗಳಕ್ಕೆ ಕಾರಣ ಏನ್ ಗೊತ್ತಾ? ಭಯ. ನಿನ್ನ ಸಾಧನೆಯ ಅಮಲಿನೊಳಗೆ ನಾನೆಲ್ಲಿ ಕಳೆದು ಹೋಗ್ತೀನೋಂತ.ನೀ ನನ್ನನ್ನೆಲ್ಲಿ ಮರೆತು ಹೋಗ್ತೀಯೋಂತ.ಸಾಧನೆಯ ಮದ ತಲೆಯೊಳಗೆ ಹೊಕ್ಕರೆ ಏನೂ ಕಾಣೋಲ್ಲ ಅಲ್ವಾ?ನಾ ನಿನ್ನ ಸಾಯೋ ಹಾಗೆ ಪ್ರೀತಿಸಿದ್ರೆ, ನೀ ನಿನ್ನ ಕೆಲ್ಸಾನ ಪ್ರಾಣಕ್ಕಿಂತ ಹೆಚ್ಚಾಗಿ ಇಷ್ಟಪಡ್ತಿದ್ದೀಯಾ? ಇವೆಲ್ಲದರ ನಡುವೆ ನಲುಗೋದು ನಾನು ಗೊತ್ತಾ?

ಅರ್ಥ ಮಾಡ್ಕೊಳ್ಳೊ. ನನ್ನ ನಿನ್ನ ನಡುವೆ ಗಾಳಿ ಹೋಗಲೂ ಆಗದಷ್ಟು ಅಂತರವಿರಬೇಕೆಂದು ಬಯಸುವವಳು ನಾನು. ಪ್ರತಿದಿನ ಮನದ ಭಾವಭಂಡಾರವನ್ನೇ ನಿನ್ನೆದುರು ಬಿಚ್ಚಿಡಬೇಕೆಂಬ ಅಪಾರ ಬಯಕೆ ನನ್ನದು.ಆದರೆ ನಿನಗೋ ಸಮಯದ ಅಭಾವ.ಇವುಗಳೆಲ್ಲವನ್ನು ಮೀರಿ ನನ್ನ ಪ್ರೀತಿಯ ಶಕ್ತಿ, ನಿನ್ನನ್ನು ನನ್ನೊಲವೆಡೆಗೆ ಸೆಳೆಯಬಹುದೆಂಬ ನಂಬಿಕೆ ನನ್ನದು. ಬಂದು ಬಿಡು ಗೆಳೆಯಾ... ಎಲ್ಲವನ್ನೂ ಕೊಡವಿ, ಒಂದೇ ಒಂದು ಬಾರಿ ನನ್ನೆಡೆಗೆ.......ನನ್ನ ಪ್ರೀತಿಯೆಡೆಗೆ........

Thursday, February 25, 2010

ವನ್ ಮಿಸ್ಡ್ ಕಾಲ್




ಅದ್ಯಾಕೋ ಫ್ರೆಂಡ್ ,ಸ್ನೇಹದ ಪರಿಪೂರ್ಣತೆಯ ರುಚಿಯನ್ನು ನೀಡಿ ಆಸ್ವಾದಿಸುವ ಮೊದಲೇ ನನ್ನಿಂದ ಮರೆಯಾಗಿ ಹೋದದ್ದು? ಫ್ರೆಂಡ್ಶಿಪ್ ಅನ್ನೋದು ಕೇವಲ ಹುಡುಗಿಯರೊಂದಿಗೆ ಮಾತ್ರ ಅನ್ನೋ ನನ್ನ ಫೀಲಿಂಗ್ಸ್ ನ ದೂರ ಮಾಡಿ ನನ್ನಿಂದಲೇ ದೂರವಾಗಿ ಹೋದದ್ದು ?



ಕಾರಿಡಾರಿನಲ್ಲಿ ನನ್ನಷ್ಟಕ್ಕೆ ನಾ ನಿಂತಿದ್ದಾಗ ನೀನೆ ನೀನಾಗಿ ಬಂದು ' ವಾಂಟ್ ಯುವರ್ ಪ್ರೆಂಡ್ ಶಿಪ್ ' ಎಂದು ಕೈ ಚಾಚಿದಾಗ ಗಲಿಬಿಲಿಗೊಂಡಿದ್ದೆ. ಆರು ತಿಂಗಳಿಂದಲೂ ನಿನ್ನ ಕಂಗಳು ನನ್ನ ಗಮನಿಸ್ತಿದ್ದನ್ನು ಗುರುತಿಸಿದ್ದೆ. ಕೊನೆಗೂ ಫ್ರೆಂಡ್ಶಿಪ್ ಗೋಸ್ಕರ ತಾನೇ ಎಂದು ಕೈ ಚಾಚಿದ್ದೆ. "ಎಲ್ಲರಂತೆ ಇವ್ನು ಒಬ್ಬ "ಅಂದ್ಕೊಂಡಿದ್ದ ನನಗೆ ಕ್ರಮೇಣ ನಿನ್ನಂತ ಸ್ನೇಹಿತನ್ನ ಪಡೆಯೋಕು ಅದ್ರಷ್ಟ ಬೇಕು ಅಂತ ಅನಿಸಿದ್ದಂತು ನಿಜ.


ನಿನ್ನ ಆ ಸಣ್ಣ ಪುಟ್ಟ ತ್ಯಾಗಗಳು, ತುಂಟ ತುಂಟ ಪ್ರಶ್ನೆಗಳು, ಹೊಡೆದಾಟ ,ಕೋಳಿಜಗಳ ಎಲ್ಲವು ನನಗೆ ಪ್ರಾಣವಾಗಿತ್ತು. ಅದೊಂದು ದಿನ' ಕಾಲೆಜಲ್ಲಿರೋ ಇಷ್ಟು ಮಂದಿಯಲ್ಲಿ ನನ್ನನ್ನೇ ಯಾಕೆ ಫ್ರೆಂಡ್ ಅಗ್ಬೇಕುಂತ ನೀ ಆಸೆ ಪಟ್ಟಿದ್ದು 'ಇಂದು ನಾ ಪ್ರಶ್ನಿಸಿದಾಗ ನೀನು ಕೊಟ್ಟ ಉತ್ತರ ನನ್ನ ಚಕಿತಗೊಳಿಸಿತ್ತು. "ನಿನ್ನ ಕಂಗಳು ನನ್ನಮ್ಮನ್ ಥರ. ನಿನ್ನ ನೋಡಿದರೆ ನನ್ನಮ್ಮನ ನೆನಪು ಬರುತ್ತೆ 'ಅಂದಿದ್ಯಲ್ವಾ ಗೆಳೆಯ? ಯಾರಿಗೂ ಬಂದೊದಗದ ಭಾಗ್ಯ ನನ್ನದಾಗಿತ್ತು.ನಿನಗೆ ಫ್ರೆಂಡ್ -ಅಮ್ಮ- ತಂಗಿ ನಾನಾಗಿದ್ರೆ ನನ್ನೆಲ್ಲ ಪ್ರಶ್ನೆಗಳಿಗೆ, ನೋವಿಗೆ ಉತ್ತರ ನೀನಾಗಿದ್ದೆ; ಸಾಂತ್ವನ ನಿನ್ನದಾಗಿತ್ತು. ಆದರೆ ಈಗ ನಿನ್ನೊಂದಿಗೆ ಎಲ್ಲರು ಇದ್ದಾರೆ; ನನ್ನನ್ನು ಬಿಟ್ಟು, ಇದೆ ಅಲ್ವಾ ವಿಪರ್ಯಾಸ?


ಯಾರನ್ನು ಏನನ್ನು ಹಚ್ಚಿಕೊಳ್ಳದ ನಾನು ನಿನ್ನ ವಿಪರೀತ ನೆಚ್ಚಿಕೊಂಡಿದ್ದೆ. ನೀ ಒಂದಿನ ಕಾಲೇಜಿಗೆ ಬರದಿದ್ರೂ 'ಛೆ! ಏನೋ ಇಲ್ವಲ್ಲಾಂತ ಅನಿಸ್ತಿತ್ತು". ನನ್ನೆಲ್ಲ ದಿನಚರಿಯನ್ನು ಬಡ ಬಡ ನಿನಗೊಪ್ಪಿಸ್ತಿದ್ರೆ ನೀನು ದಿವ್ಯ ಮುನಿ. ಕೇವಲ ಕಿರುನಗೆಯೊಂದೆ ನಿನ್ನುತ್ತರ. ನಾನು ಮಾತಿನ ಮಲ್ಲಿಯಾದರೆ ನೀನು ಬಾಯಿಬಾರದ ಮೂಕ. ನನ್ನೆಲ್ಲ ಗೆಲುವುಗಳಿಗೆ ನಿನ್ನದೊಂದು ಕಿರುನಗೆ ಉತ್ತರವಾಗಿದ್ದರು ಸೋತಾಗ ನೀ ನೀಡಿದ್ದ ಸಾಂತ್ವಾನ, ಆಸರೆ ಮರೆಯಲಸಾಧ್ಯ. ಅದಕ್ಕೆ ಕಣೋ ಗೆಲುವಿಗಿಂತಲೂ ಸೋಲನ್ನೇ ನಿನ್ನೊಂದಿಗೆ ಹೆಚ್ಚಾಗಿ ಹಂಚಿಕೊಂಡಿದ್ದು. ಯಾವುದನ್ನೇ ಆಗಲಿ ನಿರ್ಲಿಪ್ತವಾಗಿ ಸ್ವೀಕರಿಸುವ ನಿನ್ನ ರೀತಿಯೇ ನನಗಿಷ್ಟವಾಗಿತ್ತು. ನನ್ನ ಸಿಟ್ಟು, ಹಠ, ಕೋಪ, ಬಾಲಿಶತನವನ್ನೆಲ್ಲ ಹಗುರವಾಗಿ ನೋಡಿ ಮೇಲು ನಗೆಯೊಂದಿಗೆ ಹೇಳಿದ್ದ ಬುದ್ದಿಮಾತು ಯಾವ ತಾಯಿ ನುಡಿಗೂ ಕಮ್ಮಿ ಇರಲಿಲ್ಲ.


ಇಷ್ಟೆಲ್ಲಾ ಕ್ಲೋಸ್ ಆಗಿದ್ದ ನೀನು ನನ್ನಿನ್ದ್ಯಾಕೆ ಒಮ್ಮೆಗೆ ದೂರವಾಗಿ ಹೋದದ್ದು ?ಎಂಬುದು ನನಗಿನ್ನೂ ಯಕ್ಷ ಪ್ರಶ್ನೆಯೇ.ಆದ್ರೆ ಗೆಳೆಯಾ, ಸ್ನೇಹ ಸಂಬಂಧಗಳನ್ನು ಮೀರಿದ್ದು, ಅದು ನಿಷ್ಕಲ್ಮಶ.ಸ್ನೇಹ ತಂಗಾಳಿಯೇ ಹೊರತು ಬಿರುಗಾಳಿಯಲ್ಲ. ಫ್ರೆಂಡ್ ಶಿಪ್ ಗೆ ಗುರಿಯಿಲ್ಲ, ಜೊತೆಗೆ ಸ್ವಾರ್ಥವು ಇಲ್ಲ.ಯಾವ ಸಂಬಂಧವು ಕೊನೆಗೊಳ್ಳಬಹುದು. ಆದರೆ ಸ್ವಾರ್ಥವಿಲ್ಲದ ಸ್ನೇಹದಲ್ಲಿ ಉಡಿಸುವುದು ಕೇವಲ ನಂಬಿಕೆ. ಈ ನನ್ನ ನಂಬಿಕೆಗೆ ಕೊಡಲಿಯೇಟು ಹಾಕದೆ, ಉಳಿಸುವಿಯೆಂಬ ನಂಬಿಕೆ ನನ್ನದು. ಸ್ನೇಹ ನೀಡುವುದು ಕಹಿಯನ್ನಲ್ಲ, ಸಿಹಿಯನ್ನು.ಸ್ನೇಹ ಬಯಸುವುದು ದ್ವೆಶವನ್ನಲ್ಲ ,ಪ್ರೀತಿಯನ್ನು. ಸ್ನೇಹ ಚಿರನೂತನ............... ಮತ್ತೆ ಸಿಗುವಿಯೆಂಬ ನಂಬಿಕೆಯಲ್ಲಿ....


Wednesday, February 17, 2010

ಸಂ( ಸಮ್) ಪ್ರೀತಿ

ಗೆಳೆಯಾ,
ಮೊದಮೊದಲು
ನಿನ್ನೆಡೆಗಿದ್ದದ್ದು "ಸಂ-ಪ್ರೀತಿ"
ಆದರೆ,
ನಿನ್ನೊಲವ ಧಾರೆಗೆ
ನನ್ನ ಹ್ರದಯ
"ಸಂಪ್ರೀತ"

ಪ್ರೀತಿ- ಕಾಂತಿ

ನಿನ್ನ ಕಣ್ಣ ಕಾಂತಿಗೆ
ನನ್ನ ಹ್ರದಯ
ಸೂರ್ಯಕಾಂತಿ
ನಿನ್ನ ಮುಗ್ಧ ಪ್ರೀತಿಗೆ
ನನ್ನ ಮನಸ್ಸು
ವಾಲಿತು ನಿನ್ನೆಡೆಗೆ
ಪೂರ್ತಿ -ಪೂರ್ತಿ

Tuesday, February 16, 2010

ಅರ್ಪಣೆ

ಗೆಳೆಯಾ,
ಮನದ ಭಾವಗಳನ್ನು
ಶಬ್ದದಲ್ಲಿ ಹೆಣೆಯುವ
ಕಥೆಗಾತಿ ನಾನಲ್ಲ
ನಿಸ್ಸಾರ ಯೋಚನೆಗಳಿಗೆ
ಕಾವ್ಯರೂಪ ಕೊಡುವ
ಕವಯತ್ರಿಯೂ ನಾನಲ್ಲ
ಆದರೆ,
ಅವೆಲ್ಲಕ್ಕೂ ಮೀರಿದ
ಪ್ರೇಮಿ ನಾನು
ನನ್ನ ಹ್ರದಯವೆ
ನಿನ್ನೊಲವ ಕಾದಂಬರಿ
ನನ್ನ ಬದುಕೇ
ಪ್ರೇಮ ಕಾವ್ಯ
ಎಲ್ಲವು ನಿನಗೆ
"ಅರ್ಪಣೆ"