Wednesday, May 13, 2009

ಛೆ!

ಒಂದನೇ ದಿನ ಸಾಲದಂಬಂತೆ ಎರಡನೇ ದಿನವೂ ಜೆ.ಪಿ ನಗರಕ್ಕೆ ಇಂಟರ್ ವ್ಯೂಗೆ ಹೋಗುವವನಿದ್ದೆ,ಉಪನ್ಯಾಸಕರ ಹುದ್ದೆಗಾಗಿ. ಎರಡು ದಿನವೂ ಆ ಮುದ್ದಾದ ಹುಡುಗಿಯನ್ನು ಮೆಜೆಸ್ಟಿಕ್ನಲ್ಲಿ ಕಂಡಿದ್ದೆ,ಕಾಕತಾಳೀಯವಾಗಿ. ಎರಡನೇ ದಿನ ಒಬ್ಬ ಹುಡುಗ ಲಾಲ್ಬಾಗ್ನಿಂದ ಹತ್ತಿ,ಆಕೆಯ ಪಕ್ಕ ಕುಳಿತ. ಆ ಹುಡುಗನ ಅದೃಷ್ಟಕ್ಕೆ ಒಂದುಚೂರು ಕುರುಬಿದೆ,ಈಷರ್ೆಗೊಂಡೆ-ನನಗೆ ದೊರಕದ ಆ ಅವಕಾಶಕ್ಕಾಗಿ. ಅಷ್ಟಾಗಿದ್ದರೆ ಪರವಾಗಿಲ್ಲವಾಗಿತ್ತು. ಆತ ಆಕೆಯೊಂದಿಗೆ ಕೈಸನ್ನೆಯಿಂದ ಏನೇನೋ ತಿಳಿಸತೊಡಗಿದ. ಆಕೆಯೂ ಕೈಸನ್ನೆಯಿಂದಲೇ ಉತ್ತರಿಸುತ್ತಿದ್ದಳು. ಆಗ ಅವಳ ಮೇಲೆ ಸ್ವಲ್ಪ ಹೆಚ್ಚೇ ಕನಿಕರ ಉಂಟಾಯಿತು.ಜೊತಗೆ ನನಗೆ ಅ ದೇವರ ಮೇಲೆ ಕೋಪವೂ ಬಂದಿತು. 'ಇಂತಹ ಸೌಂದರ್ಯದ ಖನಿಯನ್ನು ಮೂಕಿಯನ್ನಾಗಿ ಯಾಕೆ ಮಾಡಿದೆ?ನಿನಗೆ ಬೇರ್ಯಾರೂ ಸಿಗಲಿಲ್ಲವೇ ಅವಳ ವಿನಃ'ಎಂದು ಏನೇನೋ ಮನಬಂದಂತೆ ಮನದಲ್ಲೇ ಬಯೈತೊಡಗಿದೆ-ಹೊರನೋಡುತ್ತಾ......
'ಜೆ.ಪಿ ನಗರ ಕೊನೆಯ ಸ್ಟಾಪ್' ಕಂಟಕ್ಟರ್ನ ಕರ್ಕಶ ಧನಿಯೊಂದಿಗೆ ಬಸ್ಸೂ ಧ್ವನಿಗೂಡಿಸಿತ್ತು. ಹುಡುಗ ಅದ್ಯಾವಾಗ ಇಳಿದಿದ್ದನೋ ಗೊತ್ತಿಲ್ಲ,ನನ್ನ ಮನಸ್ಸಂತೂ ನಿರಾಳಗೊಂಡಿತ್ತು. ನನ್ನ ಕೈಯಲ್ಲಿ ನಾನು ಹೋಗಬೇಕಾದ ಕಾಲೇಜಿನ ಎಡ್ರೆಸ್ ಇತ್ತು,ಜೊತೆಗೆ ಆ ಸುಂದರಿಯನ್ನು ಹೇಗಾದರೂ ಮಾಡಿ ಪರಿಚಯಿಸಿಕೊಳ್ಳಬೇಕೆಂಬ ಮಹದಾಸೆಯೂ ಇತ್ತು. ಬಸ್ಸು ಇಳಿದಿದ್ದ ಅವಳು ಅವಸರವಾಗಿ ಮುಂದೆ ಸಾಗುತ್ತಿದ್ದಳು. ಆ ಸೌಂದರ್ಯದೇವತೆಯು ಎಲ್ಲಿ ಮಾಯವಾಗಿ ಬಿಡುತ್ತಾಳೋ ಎಂಬ ಭಯದಿಂದ ವೇಗವಾಗಿ ಅವಳನ್ನು ಹಿಂಬಾಲಿಸಿ ಆಕೆಯ ಪಕ್ಕಕ್ಕೆ ಹೋದೆ. ಆಗ ಅವಳನ್ನು ಹೇಗೆ ಮಾತನಾಡಿಸಬೇಕೆಂಬ ಸಮಸ್ಯೆ ಶುರುವಾಯಿತು,ಎಡ್ರೆಸ್ ಮೂಲಕ ಅದಕ್ಕೆ ಪರಿಹಾರ ದೊರೆತಿತ್ತು.
"ಗಣಪತಿ ಕಾಲೇಜ್' ಹೇಗೆ ಸನ್ನೆ ಮಾಡಲಿ?ಹೊಳೆದಿತ್ತು.ಎಡಗೈಯಿಂದ ನನ್ನ ಮೂಗು ಹಿಡಿದು ಬಲಗೈಯನ್ನು ಮೆಲ್ಲನೆ ಮಡಚಿದ ಕೈಯೊಳಗೆ ಹಾಕಿ 'ಗಣಪತಿ' ಸನ್ನೆ ತೋರಿಸಿದೆ. ಆಕೆಗೆ ಗಾಬರಿಯಾಯಿತು. ಪಕ್ಕಕ್ಕೆ ಸರಿದಳು. ಆದರೆ ನಾನು ಬಿಡಲಿಲ್ಲ. ಪುಸ್ತಕದ ಚಿಹ್ನೆ ತೋರಿಸಿ ಕೈ ಬಳುಕಿಸಿ ದಾರಿ ಹೇಗೆ? ಎನ್ನುವಂತೆ ಕೇಳಿದೆ. ಬಹುಷಃ ಅವಳಿಗೆ ಅರ್ಥವಾಗಿರಬೇಕು. ಮೊದಲು 3 ಎಂದು ತೋರಿಸಿ ಬಳಿಕ ಬಲಭಾಗ ಎಂದು ಸನ್ನೆ ಮಾಡಿ ಸಣ್ಣಗೆ ನಕ್ಕಳು. ನಾನು ಥ್ಯಾಂಕ್ಸ್ಗಾಗಿ ನಮಸ್ತೆ ತೋರಿಸಿ ಅವಳ ನಗುವನ್ನು ಮನದಲ್ಲಿ ತುಂಬಿಕೊಂಡೆ. ಹೋಗುವ ಮನಸಿಲ್ಲದಿದ್ದರು ಗಂಬೀರವಾಗಿ ಮುಂದೆ ನಡೆದೆ.
ಮೆಲ್ಲನೆ ಹಿಂದಿರುಗಿ ನೋಡಿದಾಗ ಆಕೆ ನಗುತ್ತಿದ್ದಳು,ಹೊಟ್ಟೆ ಹುಣ್ಣಾಗುವಂತೆ.ಪುಸ್ತಕವನ್ನು ಅವುಚಿ ಹಿಡಿದುಕೊಳ್ಳುತ್ತಾ. ಮತ್ತೆ ಹೇಳಿದಳು , 'ಹಲೋ! ನಾನೇನು ಮೂಕಿಯಲ್ಲ!'
ಆಗ ನಾನು 'ಮೂಕನಾದೆ'!

Tuesday, May 12, 2009

ಮೊದಲ್ನುಡಿ........

ಗೆಳತಿಯೊಬ್ಬಳು ನಿನ್ ಬ್ಲಾಗ್ ಎಡ್ರೆಸ್ ಕೊಡೆ ಎಂದು ಕೇಳಿದಾಗ, ನಾನಿನ್ನೂ ಕ್ರಿಯೇಟ್ ಮಾಡಿಲ್ವಲ್ಲೇ ಎಂದುತ್ತರಿಸಿದ್ದೆ.ಅಲ್ಲದೆ ಅವಳಿಂದ ನಾಯಿಗೆ ಉಗಿಸಿಕೊಳ್ವಂತೆ ಉಗಿಸಿಕೊಂಡಿದ್ದೆ."ನೀನೇನು ಜರ್ನಲಿಸಂ ಸ್ಟೂಡೆಂಟಾ?ನಾಚಿಕೆ ಆಗಲ್ವಾ, ಇಲ್ಲಾ ಅನ್ನೋಕೆ?'ಎಂದೆಲ್ಲಾ ಬೈಯು ಕೇಳಿ ಅಂತು ಇಂತು ಬ್ಲಾಗ್ ಕ್ರಿಯೇಟ್ ಮಾಡೋಕೆ ಮನಸು ಮಾಡಿದ್ದೆ. ಆರಂಭದಲ್ಲಿ ಎಲ್ಲವೂ ಚೆನ್ನ. ಗೆಳತಿಯ ಉಗಿತದ ಮೇರೆಗೆ ಬ್ಲಾಗೇನೋ ಕ್ರಿಯೇಟ್ ಮಾಡಿದ್ದೆ.ಆದರೆ ಬರಿಯೋಕೆ ವಿಷಯ? 'ಮನದೊಳಗಿನ ಮತುಗಳನ್ನು ಬರೀಬೋದು, ಆದ್ರೆ ಓದೋರಿಗೆ ಹಿಂಸೆ ಆಗ್ಬಾರ್ದಲ್ಲಾ?ಇದೇನಪ್ಪಾ ಜರ್ನಲಿಸಂ ಸ್ಟೂಡೆಂಟೇ ಹೀಗೆ ಬರೀತಾಳಪ್ಪಾ ಅಂದ್ಕೊಂಡ್ರೆ' ಎಂಬೆಲ್ಲಾ ಭಾವಗಳು ಮನದೊಳಗೆ ತಕಧಿಮಿಯಾಡತೊಡಗಿದವು. ಗೆಳೆಯನ ಬಳಿ ಇದನ್ನುಸುರಿದಾಗ " ಏನೂ ಆಗಲ್ಲಾ, ಬರೀತಾ ಬರೀತಾ ಎಲ್ಲಾ ಸರಿಹೋಗುತ್ತೆ' ಎಂದು ಧೈರ್ಯ ತುಂಬಿದ್ದ. ಆಗ ಭಯದ ಭಾವವೇನೊ ನಿರಾಳವಾಗಿತ್ತು.ಮನದ ಮಾತುಗಳನ್ನು, ಭಾವನೆಗಳನ್ನು,ಹೊಸ ವಿಷಯಗಳನ್ನು ಹಂಚಿಕೊಳ್ಳಲು ಜೊತೆಗೆ ಬರವಣಿಗೆಯನ್ನು ಒರೆಗೆ ಹಚ್ಚಲು 'ಭಾವನಿರಾಳ'ವನ್ನು ಆರಂಭಿಸಿದ್ದೇನೆ.ಇದು ನನ್ನ ಚೊಚ್ಚಲ ಬ್ಲಾಗ್ ಬರಹ.ಓದಿ,ತಿದ್ದಿದರೆ ನಿಮಗೆ ಋಣಿ.

Monday, May 11, 2009