Thursday, March 11, 2010

ಸಂಬಂಧಗಳ ಸಂಕೋಲೆಯೊಳಗೆ..............


ಈ ಸಂಬಂಧಗಳೇ ಹೀಗೆ; ದ್ಚಂದ್ವಕ್ಕೀಡು ಮಾಡುತ್ತವೆ. ಕೆಲವೊಮ್ಮೆ ಅತಿಯಾಗಿ ನೆಚ್ಚುವಂತೆ ಮಾಡಿದರೆ, ಮತ್ತೆ ಕೆಲವೊಮ್ಮೆ ನಂಬಿಕೆಯನ್ನೇ ಅಡಿಮೇಲು ಮಾಡುತ್ತದೆ.ಪ್ರತಿಯೊಂದು ಬಂಧವೂ ಅಷ್ಟೇ; ನೀರ ಮೇಲಿನ ಗುಳ್ಳೆಯಂತೆ.ಯಾವಾಗ ಒಡೆದು ಹೋಗುವುದೋ ತಿಳಿಯುವುದಿಲ್ಲ. ಆಧುನಿಕತೆಯ ಪ್ರಭಾವವೋ ಏನೋ ಸಂಬಂಧಗಳು ಬಂಧ ಕಳೆದುಕೊಳ್ಳುತ್ತಾ ಸಾಗುತ್ತಿವೆ.

ಹಿಂದೆ ಹೀಗಿರಲಿಲ್ಲ. 'ಮನೆ 'ಎಂಬುದು ಸಂಬಂಧಗಳ ಸಂಕೋಲೆಯಿಂದ ಘಟ್ಟಿಯಾಗಿತ್ತು. ಸ್ನೇಹಿತರು ಅರ್ಥೈಸುವಿಕೆಯ ಮೂಲಕ ಪರಸ್ಪರ ಗಾಢರಾಗುತ್ತಿದ್ದರು. ಸಹೋದರತೆ ಸಹಕಾರದಿಂದ ಬಲವಾಗುತ್ತಿತ್ತು.ಇಂದು ಕಾಲ ಬದಲಾಗಿದೆ. ಜೊತೆಗೆ ಸಂಬಂಧಗಳ ಬಾಳ್ವಿಕೆಯೂ .ಮಕ್ಕಳು ಅಪ್ಪ ಅಮ್ಮನಿಗಿಂತಲೂ ಅಜ್ಜ-ಅಜ್ಜಿಯನ್ನು ನೆಚ್ಚಿಕೊಂಡಿದ್ದ ಕಾಲವೊಂದಿತ್ತು. ಕಥೆ ಹೇಳಲು, ಉಪ್ಪು ಮೂಟೆ ಮಾಡಲು, ಆಡಲು ಹೆಚ್ಚೇಕೆ ಜೊತೆಗೆ ಮಲಗಲೂ ತಾತನೇ ಬೇಕಾಗಿತ್ತು.

ವಿಪರ್ಯಾಸ ನೋಡಿ. ಇಂದು ಅವಿಭಕ್ತ ಕುಟುಂಬಗಳು ಒಡೆದು 'ಚೊಕ್ಕ ಕುಟುಂಬ'ದ ನೆವದಿಂದ ಚಿಕ್ಕದಾಗಿವೆ. ಅಮ್ಮ ದುಡಿಯಲು ಹೋದರೆ ಅಪ್ಪ ಆಫೀಸಿನಲ್ಲಿ ಬ್ಯುಸಿ. ಮಕ್ಕಳು ಮಾತ್ರ ಅನಾಥರು. ಅವರನ್ನು ನೋಡಿಕೊಳ್ಳಲು ಆಯಾಗಳಿಗೆ ಸಂಬಳ ಬೇಡವೇ? ಜೊತೆಗೆ 'ಸೆಕ್ಯುರಿಟಿ' ಪ್ರಶ್ನೆ ಬೇರೆ. ಆಗ ನೆನಪಾಗುವುದು ವಯಸ್ಸಾದ ಅಜ್ಜ-ಅಜ್ಜಿ. ಹೀಗೆ ಪ್ರತಿಯೊಂದು ಸಂಬಂಧದಲ್ಲೂ ಬಿರುಕು ಬಿಡುತ್ತಾ ಸಾಗಿದರೆ....? ಯಾಂತ್ರಿಕ ಮಾನವ ರೋಬೋಟ್ ಆಗುವುದರಲ್ಲಿ ಸಂಶಯವಿಲ್ಲ.

ಈ ಬಂಧಗಳು 'ಪ್ರಾಫಿಟ್ ಓರಿಯೆಂಟೆಡ್' ಆಗುತ್ತಾ ಸಾಗುತ್ತಿವೆ.ಲಾಭವಿದ್ದರೆ ಮಾತ್ರ ಸಂಬಂಧಗಳು ಉಂಟಾಗುತ್ತಿವೆ; ಮುಂದುವರಿಯುತ್ತದೆ. ಸ್ವಾರ್ಥವಿಲ್ಲದ ಸ್ನೇಹ ಸಂಬಂಧದಲ್ಲೂ ಪ್ರೆಸ್ಟೀಜ್, ಲಾಭದ ಪ್ರಶ್ನೆ ತಲೆಯೆತ್ತಿದೆಯೆಂದರೆ ಉಳಿದ ಸಂಬಂಧಗಳ ಗತಿ ಏನಾಗಬೇಕು? ಪ್ರತಿಯೊಂದು ಸಂಬಂಧವೂ ನಂಬಿಕೆಯ ಬಲವಾದ ತಳಹದಿಯ ಮೇಲೆ ನಿಂತಿರುತ್ತದೆ. ನಂಬಿಕೆಯೇ ಇಲ್ಲದಿದ್ದರೆ......? ಅಲ್ಲಿಗೆ ಒಂದು ಸಂಬಂಧದ ಕೊಲೆಯಾಗುವುದು ಖಂಡಿತ. ಎಲ್ಲರೂ ಸ್ವಾರ್ಥಿಗಳಾಗುತ್ತಿದ್ದಾರೆ .'ನಾನು- ನನ್ನತನ' ಎನ್ನುವುದು 'ನಾವು' ಎಂಬ ಭಾವವನ್ನು ಸಾಯಿಸುತ್ತಿದೆ.ಭಾವನೆಗಳೇ ಇಲ್ಲದೆ ನಿರ್ಜಿವ ಶವದಂತೆ ಬದುಕುತ್ತಿದ್ದೇವೆ.ಭಾವಲೋಕದಿಂದ ಶೂನ್ಯಲೋಕಕ್ಕೆ ನಮ್ಮನ್ನು ನಾವೇ ಅರ್ಪಿಸಿಕೊಲ್ಲುತ್ತಿದ್ದೇವೆ. ಪರಿಚಿತರಾದರೂ ಅಪರಿಚಿತತೆಯ ಸೋಗಿನಲ್ಲಿ ಬಾಳುತ್ತಿದ್ದೇವೆ.ಪಟ್ಟಣಗಳಲ್ಲಂತೂ ಬಿಡಿ. ಪಕ್ಕದ ಮನೆಯವರೇ ಯಾರೆಂದು ಅರಿಯದ ಸ್ಥಿತಿ. ನಾಲ್ಕು ಗೋಡೆಗಳ ನಡುವಿನ ಜೀವನ. ಸಮಾಜದಲ್ಲಿ ಬೆರೆಯಲೂ ಭಯ. ಯಾರಾದರೂ ಏನಂದಾರೋ ಎಂಬ ಭಾವ. ಹೀಗೇ ಮುಂದುವರಿದರೆ ಭಾರತೀಯ ಸಂಸ್ಕ್ರತಿ ಮಾಯವಾಗಿ ಪಾಶ್ಚಾತ್ಯತೆ ನಮ್ಮನ್ನು ಆವರಿಸುವುದರಲ್ಲಿ ಸಂಶಯವಿಲ್ಲ. ಮುಂದೊಂದು ದಿನ ಮಗುವೇ ಹೆತ್ತಮ್ಮನನ್ನು ಯಾರೆಂದು ಕೇಳುವ ಸಂದರ್ಭ ಬಂದರೆ ಅಚ್ಚರಿ ಪಡಬೇಕಾಗಿಲ್ಲ.

ಸಂಬಂಧಗಳ ಬಂಧದಲ್ಲಿ ಒಂದಾದರೆ ನಷ್ಟವೇನು? ಸಂಬಂಧ ಬಂಧಿಸುತ್ತದೆ........... ಪ್ರೀತಿಯಿಂದ....... ಮಧುರಬಾವದಿಂದ..........ಪ್ರತಿಯೊಬ್ಬರನ್ನೂ...............

No comments:

Post a Comment