Friday, March 26, 2010

'ಪ್ರೀತಿ' ನೀ ಹೀಗೇಕೆ?


"ಪ್ರೀತಿ ಎಂಬುದು ಬಿಗಿ ಮುಷ್ಟಿಯಲ್ಲಿ ಹಿಡಿದ ಮರಳಿನಂತಾಗಬಾರದು, ಹಿಡಿತ ಬಲವಾದಂತೆ ಮುಷ್ಟಿಯಲ್ಲಿ ಶೂನ್ಯ ಆವರಿಸುತ್ತದೆ.ಪ್ರೇಮಕ್ಕೆ ಮೃದುತ್ವ, ಸ್ವಾತಂತ್ರ್ಯ ಅಗತ್ಯ. ಇಲ್ಲದಿದ್ದರೆ ಅದು ಸಾಯುತ್ತದೆ" ಎಂದೆಯಲ್ಲಾ ಗೆಳೆಯಾ? ನನಗೆ ಪ್ರೀತಿಸುವ ಹೃದಯವಿಲ್ಲ, ಪ್ರೇಮವೆಂದರೆ ಏನೆಂದು ತಿಳಿದಿಲ್ಲ ಅಂದುಕೊಂಡುಯಾ?ನನ್ನೊಲವು ನಿನಗೆ ಬಂಧನವಾಯಿತೇ?"ನೀನು ನನಗೋಸ್ಕರ" ಎಂಬ ನನ್ನ ಪ್ರೀತಿ ತುಂಬಿದ ಸ್ವಾರ್ಥ ಭಾವವೇ ನಿನ್ನ ಸ್ವಾತಂತ್ರ್ಯಕ್ಕೆ ಅಡ್ಡಿಯಾಯಿತೇ?

ಪ್ರೀತಿಯ ಇನ್ನೊಂದು ಮುಖವೇ ಸ್ವಾರ್ಥ ಕಣೋ.ಸ್ವಾರ್ಥವಿಲ್ಲದ ಪ್ರೀತಿ ದೇವರದು ಮಾತ್ರ, ನಾ ನಿನಗೆ ದೇವತೆಯಾಗಲಾರೆ. ನಾ ನಿನಗೆ ಅಸಾಮಾನ್ಯ ಪ್ರೀತಿ ನೀಡಲಾರೆ.ಆದರೆ ಸಾಮಾನ್ಯತೆಯಲ್ಲಿ ಪ್ರೇಮದ ಪರಿಪೂರ್ಣತೆಯನ್ನು ತೋರಿಸಬಲ್ಲೆ.ಇದು ನನ್ನ ಪ್ರೀತಿ ಶಕ್ತಿ ಮೇಲಿರುವ ಅಪೂರ್ವ ನಂಬಿಕೆ.ಆದರೆ ನಿನ್ನ ಆ ಮಾತುಗಳು ನನ್ನ ಬಲವನ್ನೇ ಕಸಿದಿದೆಯಲ್ಲಾ?ಇದಕ್ಕೆ ನೀನೊಬ್ಬನೇ ಉತ್ತರವಾಗಬಲ್ಲೆ.

"ಪ್ರೀತಿ ಮಧುರ ತ್ಯಾಗ ಅಮರ" ನಿಜ.ಆದರೆ ತ್ಯಾಗವೇ ಪ್ರೀತಿಯಲ್ಲ.ಅದು ಕೇವಲ ಭ್ರಮೆ.ನಂಬಿದ ಪ್ರೀತಿಯನ್ನೇ ತ್ಯಾಗ ಮಾಡಬೇಕಾದರೆ ಯಾಕೆ ಪ್ರೀತಿಸಬೇಕು?ನಿಷ್ಕಲ್ಮಶ ಭಾವದೆಡೆಯಿಂದೆದ್ದ ಸಣ್ಣ ಸ್ವಾರ್ಥ ಭಾವವೇ ಪ್ರೀತಿ. ಇಂಥ ನನ್ನ ಪ್ರೀತಿಯೇ ನಿನಗೆ ಮುಳುವಾಯಿತೆಂದರೆ........ ನಾನೇನು ಮಾಡಲಿ? ನನಗೀಗ ಗೋಚರಿಸುತ್ತಿರುವುದು ತ್ಯಾಗವೂ ಅಲ್ಲ ಪ್ರೀತಿಯೂ ಅಲ್ಲ, ಕೇವಲ ಶೂನ್ಯ.............ಅರ್ಥ ಮಾಡಿಕೊಳ್ಳುವಿಯೆಂಬ ಭಾವ ಮಾತ್ರ ಈಗ ನನ್ನೊಂದಿಗೆ ಉಳಿದಿರುವುದು.

No comments:

Post a Comment