Friday, March 26, 2010

'ಪ್ರೀತಿ' ನೀ ಹೀಗೇಕೆ?


"ಪ್ರೀತಿ ಎಂಬುದು ಬಿಗಿ ಮುಷ್ಟಿಯಲ್ಲಿ ಹಿಡಿದ ಮರಳಿನಂತಾಗಬಾರದು, ಹಿಡಿತ ಬಲವಾದಂತೆ ಮುಷ್ಟಿಯಲ್ಲಿ ಶೂನ್ಯ ಆವರಿಸುತ್ತದೆ.ಪ್ರೇಮಕ್ಕೆ ಮೃದುತ್ವ, ಸ್ವಾತಂತ್ರ್ಯ ಅಗತ್ಯ. ಇಲ್ಲದಿದ್ದರೆ ಅದು ಸಾಯುತ್ತದೆ" ಎಂದೆಯಲ್ಲಾ ಗೆಳೆಯಾ? ನನಗೆ ಪ್ರೀತಿಸುವ ಹೃದಯವಿಲ್ಲ, ಪ್ರೇಮವೆಂದರೆ ಏನೆಂದು ತಿಳಿದಿಲ್ಲ ಅಂದುಕೊಂಡುಯಾ?ನನ್ನೊಲವು ನಿನಗೆ ಬಂಧನವಾಯಿತೇ?"ನೀನು ನನಗೋಸ್ಕರ" ಎಂಬ ನನ್ನ ಪ್ರೀತಿ ತುಂಬಿದ ಸ್ವಾರ್ಥ ಭಾವವೇ ನಿನ್ನ ಸ್ವಾತಂತ್ರ್ಯಕ್ಕೆ ಅಡ್ಡಿಯಾಯಿತೇ?

ಪ್ರೀತಿಯ ಇನ್ನೊಂದು ಮುಖವೇ ಸ್ವಾರ್ಥ ಕಣೋ.ಸ್ವಾರ್ಥವಿಲ್ಲದ ಪ್ರೀತಿ ದೇವರದು ಮಾತ್ರ, ನಾ ನಿನಗೆ ದೇವತೆಯಾಗಲಾರೆ. ನಾ ನಿನಗೆ ಅಸಾಮಾನ್ಯ ಪ್ರೀತಿ ನೀಡಲಾರೆ.ಆದರೆ ಸಾಮಾನ್ಯತೆಯಲ್ಲಿ ಪ್ರೇಮದ ಪರಿಪೂರ್ಣತೆಯನ್ನು ತೋರಿಸಬಲ್ಲೆ.ಇದು ನನ್ನ ಪ್ರೀತಿ ಶಕ್ತಿ ಮೇಲಿರುವ ಅಪೂರ್ವ ನಂಬಿಕೆ.ಆದರೆ ನಿನ್ನ ಆ ಮಾತುಗಳು ನನ್ನ ಬಲವನ್ನೇ ಕಸಿದಿದೆಯಲ್ಲಾ?ಇದಕ್ಕೆ ನೀನೊಬ್ಬನೇ ಉತ್ತರವಾಗಬಲ್ಲೆ.

"ಪ್ರೀತಿ ಮಧುರ ತ್ಯಾಗ ಅಮರ" ನಿಜ.ಆದರೆ ತ್ಯಾಗವೇ ಪ್ರೀತಿಯಲ್ಲ.ಅದು ಕೇವಲ ಭ್ರಮೆ.ನಂಬಿದ ಪ್ರೀತಿಯನ್ನೇ ತ್ಯಾಗ ಮಾಡಬೇಕಾದರೆ ಯಾಕೆ ಪ್ರೀತಿಸಬೇಕು?ನಿಷ್ಕಲ್ಮಶ ಭಾವದೆಡೆಯಿಂದೆದ್ದ ಸಣ್ಣ ಸ್ವಾರ್ಥ ಭಾವವೇ ಪ್ರೀತಿ. ಇಂಥ ನನ್ನ ಪ್ರೀತಿಯೇ ನಿನಗೆ ಮುಳುವಾಯಿತೆಂದರೆ........ ನಾನೇನು ಮಾಡಲಿ? ನನಗೀಗ ಗೋಚರಿಸುತ್ತಿರುವುದು ತ್ಯಾಗವೂ ಅಲ್ಲ ಪ್ರೀತಿಯೂ ಅಲ್ಲ, ಕೇವಲ ಶೂನ್ಯ.............ಅರ್ಥ ಮಾಡಿಕೊಳ್ಳುವಿಯೆಂಬ ಭಾವ ಮಾತ್ರ ಈಗ ನನ್ನೊಂದಿಗೆ ಉಳಿದಿರುವುದು.

Thursday, March 11, 2010

ಸಂಬಂಧಗಳ ಸಂಕೋಲೆಯೊಳಗೆ..............


ಈ ಸಂಬಂಧಗಳೇ ಹೀಗೆ; ದ್ಚಂದ್ವಕ್ಕೀಡು ಮಾಡುತ್ತವೆ. ಕೆಲವೊಮ್ಮೆ ಅತಿಯಾಗಿ ನೆಚ್ಚುವಂತೆ ಮಾಡಿದರೆ, ಮತ್ತೆ ಕೆಲವೊಮ್ಮೆ ನಂಬಿಕೆಯನ್ನೇ ಅಡಿಮೇಲು ಮಾಡುತ್ತದೆ.ಪ್ರತಿಯೊಂದು ಬಂಧವೂ ಅಷ್ಟೇ; ನೀರ ಮೇಲಿನ ಗುಳ್ಳೆಯಂತೆ.ಯಾವಾಗ ಒಡೆದು ಹೋಗುವುದೋ ತಿಳಿಯುವುದಿಲ್ಲ. ಆಧುನಿಕತೆಯ ಪ್ರಭಾವವೋ ಏನೋ ಸಂಬಂಧಗಳು ಬಂಧ ಕಳೆದುಕೊಳ್ಳುತ್ತಾ ಸಾಗುತ್ತಿವೆ.

ಹಿಂದೆ ಹೀಗಿರಲಿಲ್ಲ. 'ಮನೆ 'ಎಂಬುದು ಸಂಬಂಧಗಳ ಸಂಕೋಲೆಯಿಂದ ಘಟ್ಟಿಯಾಗಿತ್ತು. ಸ್ನೇಹಿತರು ಅರ್ಥೈಸುವಿಕೆಯ ಮೂಲಕ ಪರಸ್ಪರ ಗಾಢರಾಗುತ್ತಿದ್ದರು. ಸಹೋದರತೆ ಸಹಕಾರದಿಂದ ಬಲವಾಗುತ್ತಿತ್ತು.ಇಂದು ಕಾಲ ಬದಲಾಗಿದೆ. ಜೊತೆಗೆ ಸಂಬಂಧಗಳ ಬಾಳ್ವಿಕೆಯೂ .ಮಕ್ಕಳು ಅಪ್ಪ ಅಮ್ಮನಿಗಿಂತಲೂ ಅಜ್ಜ-ಅಜ್ಜಿಯನ್ನು ನೆಚ್ಚಿಕೊಂಡಿದ್ದ ಕಾಲವೊಂದಿತ್ತು. ಕಥೆ ಹೇಳಲು, ಉಪ್ಪು ಮೂಟೆ ಮಾಡಲು, ಆಡಲು ಹೆಚ್ಚೇಕೆ ಜೊತೆಗೆ ಮಲಗಲೂ ತಾತನೇ ಬೇಕಾಗಿತ್ತು.

ವಿಪರ್ಯಾಸ ನೋಡಿ. ಇಂದು ಅವಿಭಕ್ತ ಕುಟುಂಬಗಳು ಒಡೆದು 'ಚೊಕ್ಕ ಕುಟುಂಬ'ದ ನೆವದಿಂದ ಚಿಕ್ಕದಾಗಿವೆ. ಅಮ್ಮ ದುಡಿಯಲು ಹೋದರೆ ಅಪ್ಪ ಆಫೀಸಿನಲ್ಲಿ ಬ್ಯುಸಿ. ಮಕ್ಕಳು ಮಾತ್ರ ಅನಾಥರು. ಅವರನ್ನು ನೋಡಿಕೊಳ್ಳಲು ಆಯಾಗಳಿಗೆ ಸಂಬಳ ಬೇಡವೇ? ಜೊತೆಗೆ 'ಸೆಕ್ಯುರಿಟಿ' ಪ್ರಶ್ನೆ ಬೇರೆ. ಆಗ ನೆನಪಾಗುವುದು ವಯಸ್ಸಾದ ಅಜ್ಜ-ಅಜ್ಜಿ. ಹೀಗೆ ಪ್ರತಿಯೊಂದು ಸಂಬಂಧದಲ್ಲೂ ಬಿರುಕು ಬಿಡುತ್ತಾ ಸಾಗಿದರೆ....? ಯಾಂತ್ರಿಕ ಮಾನವ ರೋಬೋಟ್ ಆಗುವುದರಲ್ಲಿ ಸಂಶಯವಿಲ್ಲ.

ಈ ಬಂಧಗಳು 'ಪ್ರಾಫಿಟ್ ಓರಿಯೆಂಟೆಡ್' ಆಗುತ್ತಾ ಸಾಗುತ್ತಿವೆ.ಲಾಭವಿದ್ದರೆ ಮಾತ್ರ ಸಂಬಂಧಗಳು ಉಂಟಾಗುತ್ತಿವೆ; ಮುಂದುವರಿಯುತ್ತದೆ. ಸ್ವಾರ್ಥವಿಲ್ಲದ ಸ್ನೇಹ ಸಂಬಂಧದಲ್ಲೂ ಪ್ರೆಸ್ಟೀಜ್, ಲಾಭದ ಪ್ರಶ್ನೆ ತಲೆಯೆತ್ತಿದೆಯೆಂದರೆ ಉಳಿದ ಸಂಬಂಧಗಳ ಗತಿ ಏನಾಗಬೇಕು? ಪ್ರತಿಯೊಂದು ಸಂಬಂಧವೂ ನಂಬಿಕೆಯ ಬಲವಾದ ತಳಹದಿಯ ಮೇಲೆ ನಿಂತಿರುತ್ತದೆ. ನಂಬಿಕೆಯೇ ಇಲ್ಲದಿದ್ದರೆ......? ಅಲ್ಲಿಗೆ ಒಂದು ಸಂಬಂಧದ ಕೊಲೆಯಾಗುವುದು ಖಂಡಿತ. ಎಲ್ಲರೂ ಸ್ವಾರ್ಥಿಗಳಾಗುತ್ತಿದ್ದಾರೆ .'ನಾನು- ನನ್ನತನ' ಎನ್ನುವುದು 'ನಾವು' ಎಂಬ ಭಾವವನ್ನು ಸಾಯಿಸುತ್ತಿದೆ.ಭಾವನೆಗಳೇ ಇಲ್ಲದೆ ನಿರ್ಜಿವ ಶವದಂತೆ ಬದುಕುತ್ತಿದ್ದೇವೆ.ಭಾವಲೋಕದಿಂದ ಶೂನ್ಯಲೋಕಕ್ಕೆ ನಮ್ಮನ್ನು ನಾವೇ ಅರ್ಪಿಸಿಕೊಲ್ಲುತ್ತಿದ್ದೇವೆ. ಪರಿಚಿತರಾದರೂ ಅಪರಿಚಿತತೆಯ ಸೋಗಿನಲ್ಲಿ ಬಾಳುತ್ತಿದ್ದೇವೆ.ಪಟ್ಟಣಗಳಲ್ಲಂತೂ ಬಿಡಿ. ಪಕ್ಕದ ಮನೆಯವರೇ ಯಾರೆಂದು ಅರಿಯದ ಸ್ಥಿತಿ. ನಾಲ್ಕು ಗೋಡೆಗಳ ನಡುವಿನ ಜೀವನ. ಸಮಾಜದಲ್ಲಿ ಬೆರೆಯಲೂ ಭಯ. ಯಾರಾದರೂ ಏನಂದಾರೋ ಎಂಬ ಭಾವ. ಹೀಗೇ ಮುಂದುವರಿದರೆ ಭಾರತೀಯ ಸಂಸ್ಕ್ರತಿ ಮಾಯವಾಗಿ ಪಾಶ್ಚಾತ್ಯತೆ ನಮ್ಮನ್ನು ಆವರಿಸುವುದರಲ್ಲಿ ಸಂಶಯವಿಲ್ಲ. ಮುಂದೊಂದು ದಿನ ಮಗುವೇ ಹೆತ್ತಮ್ಮನನ್ನು ಯಾರೆಂದು ಕೇಳುವ ಸಂದರ್ಭ ಬಂದರೆ ಅಚ್ಚರಿ ಪಡಬೇಕಾಗಿಲ್ಲ.

ಸಂಬಂಧಗಳ ಬಂಧದಲ್ಲಿ ಒಂದಾದರೆ ನಷ್ಟವೇನು? ಸಂಬಂಧ ಬಂಧಿಸುತ್ತದೆ........... ಪ್ರೀತಿಯಿಂದ....... ಮಧುರಬಾವದಿಂದ..........ಪ್ರತಿಯೊಬ್ಬರನ್ನೂ...............

Tuesday, March 9, 2010

ಪ್ರೀತಿಯಲಿ ಹೀಗೇಕೆ?


ಇಂದ್ಯಾಕೋ ಬೆಳ್ಳಂಗೆಳಗ್ಗೆಯೇ ನಿನ್ನ ನೆನಪು ಒತ್ತರಿಸಿಕೊಂಡು ಬರುತ್ತಿದೆ.Justify Full ಕಾರಣ ನೆನ್ನೆ ರಾತ್ರಿಯ ಜಗಳದ ಗುಂಗು. ಅದೆಷ್ಟು ಬಾರಿ ನಿನ್ನೊಂದಿಗೆ ಜಗಳ ಆಡ್ತೀನೋ ನಂಗೊತ್ತಿಲ್ಲ. ಆದರೆ ಈ ಸಣ್ಣಪುಟ್ಟ ಕದನವೇ ನನ್ನನ್ನು ನಿನ್ನ ಸನಿಹಕ್ಕೆಳೆಯುತ್ತಿದೆ. ಈ ಪ್ರಪಂಚವನ್ನೆ ಸುಟ್ಟು ಹಾಕುವಷ್ಟು ಸಿಟ್ಟು ಬರ್ತಿದೆ.ಯಾಕ್ ಗೊತ್ತಾ?ನಮ್ಮಿಬ್ಬರ ನಡುವೆ ಅಂತರ ಉಂಟು ಮಾಡಿದ್ಯಲ್ಲಾ ಅದಕ್ಕೆ.

ನೀನು ನಿನ್ನ ಕೆಲಸದೊಳಗೆ ಮುಳುಗಿ ಹೋಗಿದ್ರೆ, ನಾನು ನನ್ನ ಓದಿನಲ್ಲಿ ತೇಲಾಡ್ತಾ ಇದೀನಿ;ಮುಳುಗೋಕೆ ಆಗದೆ. ನಿನ್ ಪ್ರೀತಿನೇ ಬಿಡ್ತಾ ಇಲ್ವೋ....ಅದಕ್ಕೆ ಈ ದ್ವಂದ್ವ.ಅದೆಷ್ಟೋ ಬಾರಿ ಅಂದ್ಕೊಂಡಿದಿನಿ ನಿನ್ ಥರಾನೇ ನಾನೂ ಎಲ್ಲವನ್ನು, ಎಲ್ಲರನ್ನೂ ಮರೆತು ನನ್ನಲ್ಲೇ ನಾ ಮುಳಗಿ ಬಿಡಬೇಕೂಂತ.ಆದರೆ ನಿನ್ನ ನಿಷ್ಕಲ್ಮಷ ಅಡೆಯಿಲ್ಲದ ಒಲವೇ ಇದಕ್ಕೆ ತಡೆಗೋಡೆ.
ಇಷ್ಟೆಲ್ಲಾ ಜಗಳಕ್ಕೆ ಕಾರಣ ಏನ್ ಗೊತ್ತಾ? ಭಯ. ನಿನ್ನ ಸಾಧನೆಯ ಅಮಲಿನೊಳಗೆ ನಾನೆಲ್ಲಿ ಕಳೆದು ಹೋಗ್ತೀನೋಂತ.ನೀ ನನ್ನನ್ನೆಲ್ಲಿ ಮರೆತು ಹೋಗ್ತೀಯೋಂತ.ಸಾಧನೆಯ ಮದ ತಲೆಯೊಳಗೆ ಹೊಕ್ಕರೆ ಏನೂ ಕಾಣೋಲ್ಲ ಅಲ್ವಾ?ನಾ ನಿನ್ನ ಸಾಯೋ ಹಾಗೆ ಪ್ರೀತಿಸಿದ್ರೆ, ನೀ ನಿನ್ನ ಕೆಲ್ಸಾನ ಪ್ರಾಣಕ್ಕಿಂತ ಹೆಚ್ಚಾಗಿ ಇಷ್ಟಪಡ್ತಿದ್ದೀಯಾ? ಇವೆಲ್ಲದರ ನಡುವೆ ನಲುಗೋದು ನಾನು ಗೊತ್ತಾ?

ಅರ್ಥ ಮಾಡ್ಕೊಳ್ಳೊ. ನನ್ನ ನಿನ್ನ ನಡುವೆ ಗಾಳಿ ಹೋಗಲೂ ಆಗದಷ್ಟು ಅಂತರವಿರಬೇಕೆಂದು ಬಯಸುವವಳು ನಾನು. ಪ್ರತಿದಿನ ಮನದ ಭಾವಭಂಡಾರವನ್ನೇ ನಿನ್ನೆದುರು ಬಿಚ್ಚಿಡಬೇಕೆಂಬ ಅಪಾರ ಬಯಕೆ ನನ್ನದು.ಆದರೆ ನಿನಗೋ ಸಮಯದ ಅಭಾವ.ಇವುಗಳೆಲ್ಲವನ್ನು ಮೀರಿ ನನ್ನ ಪ್ರೀತಿಯ ಶಕ್ತಿ, ನಿನ್ನನ್ನು ನನ್ನೊಲವೆಡೆಗೆ ಸೆಳೆಯಬಹುದೆಂಬ ನಂಬಿಕೆ ನನ್ನದು. ಬಂದು ಬಿಡು ಗೆಳೆಯಾ... ಎಲ್ಲವನ್ನೂ ಕೊಡವಿ, ಒಂದೇ ಒಂದು ಬಾರಿ ನನ್ನೆಡೆಗೆ.......ನನ್ನ ಪ್ರೀತಿಯೆಡೆಗೆ........

Thursday, February 25, 2010

ವನ್ ಮಿಸ್ಡ್ ಕಾಲ್




ಅದ್ಯಾಕೋ ಫ್ರೆಂಡ್ ,ಸ್ನೇಹದ ಪರಿಪೂರ್ಣತೆಯ ರುಚಿಯನ್ನು ನೀಡಿ ಆಸ್ವಾದಿಸುವ ಮೊದಲೇ ನನ್ನಿಂದ ಮರೆಯಾಗಿ ಹೋದದ್ದು? ಫ್ರೆಂಡ್ಶಿಪ್ ಅನ್ನೋದು ಕೇವಲ ಹುಡುಗಿಯರೊಂದಿಗೆ ಮಾತ್ರ ಅನ್ನೋ ನನ್ನ ಫೀಲಿಂಗ್ಸ್ ನ ದೂರ ಮಾಡಿ ನನ್ನಿಂದಲೇ ದೂರವಾಗಿ ಹೋದದ್ದು ?



ಕಾರಿಡಾರಿನಲ್ಲಿ ನನ್ನಷ್ಟಕ್ಕೆ ನಾ ನಿಂತಿದ್ದಾಗ ನೀನೆ ನೀನಾಗಿ ಬಂದು ' ವಾಂಟ್ ಯುವರ್ ಪ್ರೆಂಡ್ ಶಿಪ್ ' ಎಂದು ಕೈ ಚಾಚಿದಾಗ ಗಲಿಬಿಲಿಗೊಂಡಿದ್ದೆ. ಆರು ತಿಂಗಳಿಂದಲೂ ನಿನ್ನ ಕಂಗಳು ನನ್ನ ಗಮನಿಸ್ತಿದ್ದನ್ನು ಗುರುತಿಸಿದ್ದೆ. ಕೊನೆಗೂ ಫ್ರೆಂಡ್ಶಿಪ್ ಗೋಸ್ಕರ ತಾನೇ ಎಂದು ಕೈ ಚಾಚಿದ್ದೆ. "ಎಲ್ಲರಂತೆ ಇವ್ನು ಒಬ್ಬ "ಅಂದ್ಕೊಂಡಿದ್ದ ನನಗೆ ಕ್ರಮೇಣ ನಿನ್ನಂತ ಸ್ನೇಹಿತನ್ನ ಪಡೆಯೋಕು ಅದ್ರಷ್ಟ ಬೇಕು ಅಂತ ಅನಿಸಿದ್ದಂತು ನಿಜ.


ನಿನ್ನ ಆ ಸಣ್ಣ ಪುಟ್ಟ ತ್ಯಾಗಗಳು, ತುಂಟ ತುಂಟ ಪ್ರಶ್ನೆಗಳು, ಹೊಡೆದಾಟ ,ಕೋಳಿಜಗಳ ಎಲ್ಲವು ನನಗೆ ಪ್ರಾಣವಾಗಿತ್ತು. ಅದೊಂದು ದಿನ' ಕಾಲೆಜಲ್ಲಿರೋ ಇಷ್ಟು ಮಂದಿಯಲ್ಲಿ ನನ್ನನ್ನೇ ಯಾಕೆ ಫ್ರೆಂಡ್ ಅಗ್ಬೇಕುಂತ ನೀ ಆಸೆ ಪಟ್ಟಿದ್ದು 'ಇಂದು ನಾ ಪ್ರಶ್ನಿಸಿದಾಗ ನೀನು ಕೊಟ್ಟ ಉತ್ತರ ನನ್ನ ಚಕಿತಗೊಳಿಸಿತ್ತು. "ನಿನ್ನ ಕಂಗಳು ನನ್ನಮ್ಮನ್ ಥರ. ನಿನ್ನ ನೋಡಿದರೆ ನನ್ನಮ್ಮನ ನೆನಪು ಬರುತ್ತೆ 'ಅಂದಿದ್ಯಲ್ವಾ ಗೆಳೆಯ? ಯಾರಿಗೂ ಬಂದೊದಗದ ಭಾಗ್ಯ ನನ್ನದಾಗಿತ್ತು.ನಿನಗೆ ಫ್ರೆಂಡ್ -ಅಮ್ಮ- ತಂಗಿ ನಾನಾಗಿದ್ರೆ ನನ್ನೆಲ್ಲ ಪ್ರಶ್ನೆಗಳಿಗೆ, ನೋವಿಗೆ ಉತ್ತರ ನೀನಾಗಿದ್ದೆ; ಸಾಂತ್ವನ ನಿನ್ನದಾಗಿತ್ತು. ಆದರೆ ಈಗ ನಿನ್ನೊಂದಿಗೆ ಎಲ್ಲರು ಇದ್ದಾರೆ; ನನ್ನನ್ನು ಬಿಟ್ಟು, ಇದೆ ಅಲ್ವಾ ವಿಪರ್ಯಾಸ?


ಯಾರನ್ನು ಏನನ್ನು ಹಚ್ಚಿಕೊಳ್ಳದ ನಾನು ನಿನ್ನ ವಿಪರೀತ ನೆಚ್ಚಿಕೊಂಡಿದ್ದೆ. ನೀ ಒಂದಿನ ಕಾಲೇಜಿಗೆ ಬರದಿದ್ರೂ 'ಛೆ! ಏನೋ ಇಲ್ವಲ್ಲಾಂತ ಅನಿಸ್ತಿತ್ತು". ನನ್ನೆಲ್ಲ ದಿನಚರಿಯನ್ನು ಬಡ ಬಡ ನಿನಗೊಪ್ಪಿಸ್ತಿದ್ರೆ ನೀನು ದಿವ್ಯ ಮುನಿ. ಕೇವಲ ಕಿರುನಗೆಯೊಂದೆ ನಿನ್ನುತ್ತರ. ನಾನು ಮಾತಿನ ಮಲ್ಲಿಯಾದರೆ ನೀನು ಬಾಯಿಬಾರದ ಮೂಕ. ನನ್ನೆಲ್ಲ ಗೆಲುವುಗಳಿಗೆ ನಿನ್ನದೊಂದು ಕಿರುನಗೆ ಉತ್ತರವಾಗಿದ್ದರು ಸೋತಾಗ ನೀ ನೀಡಿದ್ದ ಸಾಂತ್ವಾನ, ಆಸರೆ ಮರೆಯಲಸಾಧ್ಯ. ಅದಕ್ಕೆ ಕಣೋ ಗೆಲುವಿಗಿಂತಲೂ ಸೋಲನ್ನೇ ನಿನ್ನೊಂದಿಗೆ ಹೆಚ್ಚಾಗಿ ಹಂಚಿಕೊಂಡಿದ್ದು. ಯಾವುದನ್ನೇ ಆಗಲಿ ನಿರ್ಲಿಪ್ತವಾಗಿ ಸ್ವೀಕರಿಸುವ ನಿನ್ನ ರೀತಿಯೇ ನನಗಿಷ್ಟವಾಗಿತ್ತು. ನನ್ನ ಸಿಟ್ಟು, ಹಠ, ಕೋಪ, ಬಾಲಿಶತನವನ್ನೆಲ್ಲ ಹಗುರವಾಗಿ ನೋಡಿ ಮೇಲು ನಗೆಯೊಂದಿಗೆ ಹೇಳಿದ್ದ ಬುದ್ದಿಮಾತು ಯಾವ ತಾಯಿ ನುಡಿಗೂ ಕಮ್ಮಿ ಇರಲಿಲ್ಲ.


ಇಷ್ಟೆಲ್ಲಾ ಕ್ಲೋಸ್ ಆಗಿದ್ದ ನೀನು ನನ್ನಿನ್ದ್ಯಾಕೆ ಒಮ್ಮೆಗೆ ದೂರವಾಗಿ ಹೋದದ್ದು ?ಎಂಬುದು ನನಗಿನ್ನೂ ಯಕ್ಷ ಪ್ರಶ್ನೆಯೇ.ಆದ್ರೆ ಗೆಳೆಯಾ, ಸ್ನೇಹ ಸಂಬಂಧಗಳನ್ನು ಮೀರಿದ್ದು, ಅದು ನಿಷ್ಕಲ್ಮಶ.ಸ್ನೇಹ ತಂಗಾಳಿಯೇ ಹೊರತು ಬಿರುಗಾಳಿಯಲ್ಲ. ಫ್ರೆಂಡ್ ಶಿಪ್ ಗೆ ಗುರಿಯಿಲ್ಲ, ಜೊತೆಗೆ ಸ್ವಾರ್ಥವು ಇಲ್ಲ.ಯಾವ ಸಂಬಂಧವು ಕೊನೆಗೊಳ್ಳಬಹುದು. ಆದರೆ ಸ್ವಾರ್ಥವಿಲ್ಲದ ಸ್ನೇಹದಲ್ಲಿ ಉಡಿಸುವುದು ಕೇವಲ ನಂಬಿಕೆ. ಈ ನನ್ನ ನಂಬಿಕೆಗೆ ಕೊಡಲಿಯೇಟು ಹಾಕದೆ, ಉಳಿಸುವಿಯೆಂಬ ನಂಬಿಕೆ ನನ್ನದು. ಸ್ನೇಹ ನೀಡುವುದು ಕಹಿಯನ್ನಲ್ಲ, ಸಿಹಿಯನ್ನು.ಸ್ನೇಹ ಬಯಸುವುದು ದ್ವೆಶವನ್ನಲ್ಲ ,ಪ್ರೀತಿಯನ್ನು. ಸ್ನೇಹ ಚಿರನೂತನ............... ಮತ್ತೆ ಸಿಗುವಿಯೆಂಬ ನಂಬಿಕೆಯಲ್ಲಿ....


Wednesday, February 17, 2010

ಸಂ( ಸಮ್) ಪ್ರೀತಿ

ಗೆಳೆಯಾ,
ಮೊದಮೊದಲು
ನಿನ್ನೆಡೆಗಿದ್ದದ್ದು "ಸಂ-ಪ್ರೀತಿ"
ಆದರೆ,
ನಿನ್ನೊಲವ ಧಾರೆಗೆ
ನನ್ನ ಹ್ರದಯ
"ಸಂಪ್ರೀತ"

ಪ್ರೀತಿ- ಕಾಂತಿ

ನಿನ್ನ ಕಣ್ಣ ಕಾಂತಿಗೆ
ನನ್ನ ಹ್ರದಯ
ಸೂರ್ಯಕಾಂತಿ
ನಿನ್ನ ಮುಗ್ಧ ಪ್ರೀತಿಗೆ
ನನ್ನ ಮನಸ್ಸು
ವಾಲಿತು ನಿನ್ನೆಡೆಗೆ
ಪೂರ್ತಿ -ಪೂರ್ತಿ

Tuesday, February 16, 2010

ಅರ್ಪಣೆ

ಗೆಳೆಯಾ,
ಮನದ ಭಾವಗಳನ್ನು
ಶಬ್ದದಲ್ಲಿ ಹೆಣೆಯುವ
ಕಥೆಗಾತಿ ನಾನಲ್ಲ
ನಿಸ್ಸಾರ ಯೋಚನೆಗಳಿಗೆ
ಕಾವ್ಯರೂಪ ಕೊಡುವ
ಕವಯತ್ರಿಯೂ ನಾನಲ್ಲ
ಆದರೆ,
ಅವೆಲ್ಲಕ್ಕೂ ಮೀರಿದ
ಪ್ರೇಮಿ ನಾನು
ನನ್ನ ಹ್ರದಯವೆ
ನಿನ್ನೊಲವ ಕಾದಂಬರಿ
ನನ್ನ ಬದುಕೇ
ಪ್ರೇಮ ಕಾವ್ಯ
ಎಲ್ಲವು ನಿನಗೆ
"ಅರ್ಪಣೆ"

Monday, February 15, 2010

ಸಂಸ್ಕೃತಿ-ಪೃಕೃತಿ........."ವಿಕೃತಿ"?


ಅದೊಂದು ಕಾಲವಿತ್ತು.....ಒಂದೂರಲ್ಲಿ ಎಲ್ಲರೂ ಎಲ್ಲರಿಗೂ ಆಪ್ತರೂ ಪರಿಚಿತರೂ ಆಗಿದ್ದರು......." ಮುಂದಿನ ಜನಾಂಗಕ್ಕೆ ಕಥೆ ಹೇಳುವ ಪರಿ ಇದಾಗಿರಬಹುದೇ?ಯೋಚಿಸಿದರೆ ಹೌದೆಂದೆನಿಸುತ್ತದೆ. ಯಾಕೆಂದರೆ ಮಾನವೀಯ ಮೌಲ್ಯಗಳು ಸಂಸ್ಕೃತಿಯೊಂದಿಗೆ ಕುಸಿಯುತ್ತಾ ಸಾಗುತ್ತಿವೆ. ದಿನದಿಂದ ದಿನಕ್ಕೆ ಬೆಳೆಯುತ್ತಿರುವ ಆಧುನಿಕತೆಯ ಭೂತ, ನಮ್ಮ ಪರಂಪರೆ ಸಂಸ್ಕೃತಿಯನ್ನೇ ನುಂಗಿ ಹಾಕಿದೆ. ಹಳ್ಳಿಗಳೂ ನಗರೀಕರಣದ ಛಾಯೆಯಡಿಯಲ್ಲೇ ಬೆಳೆಯುತ್ತಿವೆ. ಮುಂದೊಂದು ದಿನ "ಹಳ್ಳಿಗಳ ದೇಶ-ಭಾರತ" ಎಂಬುದನ್ನು ನಮ್ಮ ಮುಂದಿನ ಜನಾಂಗ "ನಗರಗಳ ದೇಶ-ಭಾರತ" ಎಂದು ಓದಬಹುದಾದ ಸಂದರ್ಭ ಒದಗಿ ಬಂದರೂ ಅಚ್ಚರಿ ಪಡಬೇಕಾಗಿಲ್ಲ. ಏಕೆಂದರೆ ಪೃಕೃತಿಯ ನಾಶ ಅಷ್ಟು ತ್ವರಿತಗತಿಯಲ್ಲಾಗುತ್ತಿದೆ.
ಹಳ್ಳಿಗಳೂ ನಗರವಾಗಲು ಟೊಂಕ ಕಟ್ಟಿ ನಿಂತಂತಿವೆ. "ನೇಗಿಲ ಯೋಗಿ" ರೈತ ಇಂದು "ಟ್ರ್ಯಾಕಟರ್"ಯಾಗಿದ್ದಾನೆ. ನೈಸರ್ಗಿಕ ಪೂರ್ಣ ವಿರಾಮ ಬಿದ್ದಿದೆ. ಕಡಿಮೆ ಅವಧಿಯ ಉತ್ತಮ ಫಸಲಿಗಾಗಿ, ರಾಸಾಯನಿಕಗಳ ಹೊಳೆಯನ್ನೇ ಸುರಿಸಲಾಗುತ್ತಿದೆ. ಇಂದಿನ ಜನಾಂಗಕ್ಕೆ ನೇಗಿಲು. ಗದ್ದೆ, ಎತ್ತು ಎಂದರೇನೆಂಬುದನ್ನು ವಿವರಿಸುವ ಸಂದರ್ಭ ಒದಗಿ ಬಂದಿದೆ. ಅವುಗಳೆಲ್ಲವೂ ವಸ್ತು ಸಂಗ್ರಹಾಲಯದಲ್ಲಿರುವುದನ್ನು ನೋಡಿದರೆ ಅಳಬೇಕೋ, ನಗಬೇಕೊ ಎನ್ನುವ ಪರಿಸ್ಥಿತಿ. ಪದ್ಯ- ಪಾಡ್ದನಗಳಂತೂ ಮರೀಚಿಕೆಯಾಗಿ ಬಿಟ್ಟಿವೆ. ಹಂಚಿನ ಮನೆಗಳಂತೂ ಕಾಣ ಸಿಗುವುದೇ ಅಪರೂಪ. ಎತ್ತ ನೋಡಿದರೂ ಕಟ್ಟಡಗಳದ್ದೇ ಕಾರುಬಾರು."ಹಸಿರು" ಎಂಬ ಪದಕ್ಕೆ ನಗರದಲ್ಲಿ ಅರ್ಥವೇ ಇಲ್ಲವಾಗಿದೆ. ಇದಕ್ಕೆ ತಕ್ಕಂತೆ ಒಗ್ಗಿಕೊಳ್ಳಲು ಮುಂದಿನ ಜನಾಂಗವನ್ನೂ ತಯಾರಿ ನಡೆಸುತ್ತಿದ್ದೇವೆ; ಪ್ರೋತ್ಸಾಹಿಸುತ್ತಿದ್ದೇವೆ.
ಇಂದಿನ ಮಕ್ಕಳಿಗಂತೂ ಚಿನ್ನಿದಾಂಡು, ಲಗೋರಿ ಮೊದಲಾದ ದೈಹಿಕವಾಗಿ ಸಧೃಢಗೊಳ್ಳುವಂತೆ ಮಾಡುವ ಆಟಗಳೆಲ್ಲವೂ ಮರೆತು ಹೋಗಿ, ಕಂಪ್ಯೂಟರೆಂಬ ಜಾದೂಗಾರನ ಮೋಡಿಗೆ ಸಿಲುಕಿದ್ದಾರೆ. ಮಾನಸಿಕವಾಗಿ,ದೈಹಿಕವಾಗಿ ದುರ್ಬಲರಾಗಲು ಇಷ್ಟು ಸಾಕಲ್ಲವೇ? ಹಿಂದಿನ ಅಜ್ಜಿಕಥೆಗಳೆಲ್ಲವೂ ಮಾಯವಾಗಿ, ಕಾಟರ್ೂನ್, ಕಾಮಿಕ್ಸ್ ಗಳು ಆ ಸ್ಥಳವನ್ನಾಕ್ರಮಿಸಿವೆ.ಇವು ಮಕ್ಕಳ ಯೋಚನಾ ಶಕ್ತಿ, ಕಲ್ಪನಾ ಶಕ್ತಿಗಳೆರಡನ್ನೂ ಕುಂಠಿತಗೊಳಿಸುತ್ತಿವೆ. ಹೀಗೇ ಮುಂದುವರಿದರೆ ಮುಂದಿನ ಜನಾಂಗ ಯಾಂತ್ರಿಕವಾಗಿ ರೋಬೋಟ್ ಗಳಂತೆ ಜೀವಿಸುವುದರಲ್ಲಿ ಸಂಶವಿಲ್ಲ.
ಸಂಸ್ಕೃತಿಯ ವಿನಾಶವನ್ನಂತೂ ಹೇಳಲಾಗದು.ಎಲ್ಲಿ ನೋಡಿದರೂ ವಿದೇಶೀ ಸಂಸ್ಜೃತಿ.ಅದೇ ಪಬ್-ಬಾರ್ ಗಳು,ಜೀನ್ಸ್ ತರುಣಿಯರು,ಸಿಗರೇಟ್ ಬಿಯರ್ನೊಂದಿಗಿನ ಹುಡುಗರು.ಇವೆಲ್ಲವೂ ಭಾರತೀಯ ಸಂಸ್ಕೃತಿಯ, ಪರಿಸರದ, ಪರಂಪರೆಯ ಅವಸಾನವನ್ನು ತೋರಿಸುತ್ತದೆಯೇ?ನಮ್ಮ ಸಂಸ್ಕೃತಿಯನ್ನು ಅನುಸರಿಸಿದರೆ ಎಲ್ಲಿ ಹಳ್ಳಿಗುಗ್ಗುಗಳೆಂದು ತಿಳಿಯುತ್ತಾರೋ ಎಂಬ ಭಯವೇ?ಅಲ್ಲ ಪಾಶ್ಚಾತ್ಯ ಸಂಸ್ಕೃತಿಯನ್ನು ಅನುಭವಿಸುವ ಚಪಲವೇ?
ಸಂಸ್ಕೃತಿ-ಪೃಕೃತಿಗಳೆರಡರ ಮೇಲೆ ಸ್ವಲ್ಪ ಪ್ರೀತಿ-ಕರುಣೆಗಳಿದ್ದರೂ ಸಾಕು......ಅವುಗಳನ್ನು ಉಳಿಸಲು. ನಮ್ಮತನ, ನಮ್ಮ ಸಂಸ್ಕೃತಿಯೆಂಬ ಸ್ವಾಭಿಮಾನದ ಭಾವವೇ ಸಾಕು ಅವುಗಳನ್ನು ಬೆಳೆಸಲು................

Saturday, February 13, 2010

ಓ ಪ್ರೇಮವೇ...............


ಪೆಬ್ರವರಿ ೧೪ ಪ್ರೇಮಿಗಳಿಗೆ ಹಬ್ಬ;ಸಂಭ್ರಮ.ಯಾವ ಡ್ರೆಸ್ ಹಾಕೋದು, ಯಾವ್ ರೀತಿಯ ಗಿಫ್ಟ್ ಕೊಡೋದು,ಹೇಗೆ ಸರ್ಪ್ರೈಜ್ ಕೊಡೋದು ಎಂಬಿತ್ಯಾದಿ ಯೋಚನೆಗಳು ಪ್ರೆಮಿಗಳಿಗಾದರೆ, ಲವ್ ಲೆಟರ್ ಬರೆಯೋದು ಹೇಗಪ್ಪ,ಯಾವ ರೀತಿ ಪ್ರೊಪೋಸ್ ಮಾಡೋದು ಎಂಬ ಯೋಚನೆಗಳು ಪ್ರೇಮ ನಿವೇದನೆ ಮಾಡುವವರಿಗೆ. ಪ್ರೇಮವೆಂದರೆ ಹಾಗೆ;ರೋಮಾಂಚನ . ಅದಕ್ಕಿರುವ ಶಕ್ತಿ ಆಗಾಧ.

ಎಲ್ಲರಿಗು ಒಂದೊಂದು ದಿನವಿರುವಂತೆ ಪ್ರೇಮಿಗಳಿಗೂ ಒಂದು ದಿನವನ್ನು ಆಚರಿಸುವಂತೆ ಮಾಡಿದ್ದು ವಾಲೆಂಟೈನ್.ರೋಮ್ ದೇಶದಲ್ಲಿ ಕ್ಲಾಡಿಯಸ್ ಎಂಬ ರಾಜನು ಯುದ್ದಕ್ಕೆ ಸೇರುವಂತೆ ಜನರನ್ನು ಪೀಡಿಸುತ್ತಿದ್ದ.ಜನರು ರಾಜನ ಉಪಟಳಕ್ಕೆ ಬೇಸತ್ತು ತಲೆ ಮರೆಸಿಕೊಳ್ಳುತ್ತಿದ್ದರು.ಇದರಿಂದ ಕೋಪಗೊಂಡ ರಾಜ ಮದುವೆಯಾಗದಂತೆ ಜನರಿಗೆ ತಡೆಯೊಡ್ಡಿದ.ಆಗ ಅದೇ ದೇಶದ ವಾಲೆಂಟೈನ್ ಎಂಬಾತ ಪ್ರೇಮಿಗಳನ್ನು ಒಗ್ಗೂಡಿಸಲು ಮಾಡುವೆ ಮಾಡಿಸುತ್ತಿದ್ದ.ಪರಿಣಾಮ ಅವನಿಗೆ ಅಜೀವ ಪರ್ಯಂತ ಶಿಕ್ಷೆ ವಿಧಿಸಲಾಯಿತು. ಆಗ ಅವನ ಕಾರ್ಯವನ್ನು ಮುಂದುವರಿಸಿಕೊಂಡು ಹೋದವಳು ಅಲ್ಲಿಯ ಕಾವಲುಗಾರನ ಮಗಳು;ದಿನಾ ಅವನನ್ನು ಭೇಟಿಯಾಗುತ್ತಿದ್ದಳು.ವಾಲೆಂಟೈನ್ ಕೊನೆಯುಸಿರೆಳೆಯುವ ಮೊದಲು ಆಕೆಗೊಂದು ಪ್ರೇಮ ಪತ್ರ ಬರೆದಿದ್ದ. ಅದರಲ್ಲಿ "ಲವ್ ಫ್ರಂ ವಾಲೆಂಟೈನ್ " ಎಂದು ಬರೆದಿದ್ದ. ವಾಲೆಂಟೈನ್ ಗೆ ಪ್ರೀತಿಯ ಮೇಲಿರುವ ಪ್ರೇಮಕ್ಕಾಗಿ ದಿನವನ್ನು "ವಾಲೆಂಟೈನ್ಸ್ ಡೆ " ಎಂದು ಆಚರಿಸಲಾಗುತ್ತದೆ.

ಪ್ರೇಮಿಗಳಿಗಾಗಿಯೇ ಒಂದು ದಿನ ಬೇಕೇ? ಪ್ರೀತಿಸುವವರಿಗೆ ಎಲ್ಲ ದಿನಗಳು ಒಂದೇ .ಮತ್ಯಾಕೆ ಪ್ರೇಮಿಗಳ ದಿನ ?ಎಂಬುದು ಇಂದು ವ್ಯಾಪಕವಾಗಿ ಚರ್ಚೆಯಲ್ಲಿರುವ ಪ್ರಶ್ನೆ.ಆದರೆ ಎಲ್ಲರಿಗು ಒಂದು ದಿನವಿರುವಂತೆ ಪ್ರೇಮಿಗಳಿಗೂ ಒಂದು ದಿನವಿದ್ದರೆ ತಪ್ಪೇನು.ಲವ್ ಜೀವನದಲ್ಲಿ ಯಾವತ್ತಿಗೂ ಎಂದೆಂದಿಗೂ ಇರುತ್ತದೆ ನಿಜ. ಪ್ರೀತಿಗೂ ಒಂದು ದಿನದ ಸಂಭ್ರಮವಿದ್ದರೆ ಪ್ರೇಮಿಗಳಿಗೆ ಅದರಲ್ಲಿರುವ ಮಜಾನೆ ಬೇರೆ.

ನಿಜವಾದ ಪ್ರೀತಿಯೇ ವಾಲೆಂಟೈನ್ ಗೆ ಪ್ರೇಮಿಗಳು, ಪ್ರೇಮಿಗಳ ದಿನದಂದು ಕೊಡಬಹುದಾದ ಕೊಡುಗೆ.ಇಂದು ಪ್ರೀತಿಯ ಅರ್ಥವೇ ಅನರ್ಥವಾಗುತ್ತಿದೆ. ಸ್ವಾರ್ಥಕ್ಕಾಗಿ,ಟೈಮ್ ಪಾಸ್ ಗಾಗಿ ಹಲವರು ಪ್ರೀತಿಯ ನಾಟಕವಾಡುತ್ತಾರೆ. ಒಬ್ಬರ ಭಾವನೆಯನ್ನು ಇನ್ನೊಬ್ಬರು ಅರ್ಥ ಮಾಡಿಕೊಳ್ಳುತ್ತಿಲ್ಲ.ಪ್ರೀತಿಯ ದುರ್ಬಳಕೆಯಾಗುತ್ತಿದೆ.ಲವ್ ಮಾಡೋದು ಒಂದು ಶೋಕಿ ಎಂಬಂತಾಗಿದೆ. ಪ್ರೇಮದ ನಿಜವಾದ ಅರ್ಥವನ್ನು ಅರಿತು, ಗಾಢವಾಗಿ ಪ್ರೀತಿಸಿದರೆ ಮಾತ್ರ "ಪ್ರೇಮಿಗಳ ದಿನಕ್ಕೊಂದು" ಅರ್ಥ ಅಲ್ಲವೇ?

Thursday, February 4, 2010

ನನ್ನೆದೆಯ ತುಂಬಾ..............

ಆಗಸದಲಿ ನಕ್ಷತ್ರದ ಮಿನುಗು
ನನ್ನೆದೆಯ ತುಂಬಾ ನಿನ್ನ ಗುನುಗು
ಹೂದೋಟದ ತುಂಬಾ ಸ್ವರ್ಣ ಸುಗಂಧ
ನನ್ನೆದೆಯ ತುಂಬಾ ನಿನ್ನ ಅನುಬಂಧ
ಮುಂಜಾನೆಯ ಮೇಲೆ ನೀರ ತುಂತುರು
ನನ್ನೆದೆಯೊಳಗೆ ನಿನ್ನ ಪ್ರೀತಿ ಶುರು
ಮುಸ್ಸಂಜೆಯ ಮೇಲೆ ಗೋಧೂಳಿಯ ಚೆಲ್ಲಾಟ
ನನ್ನೆದೆಯೊಳಗೆ ನಿನ್ನೊಲವ ತಕಧಿಮಿತ
ನಿಶೆಯ ಮೇಲೆ ಬೆಳದಿಂಗಳ ಅಭಿಷೇಕ
ನನ್ನೆದೆಯೊಳಗೆ ವಿರಹದಾ ಶೋಕ
ಉಷೆಯೊಂದಿಗೆ ಹಕ್ಕಿಗಳ ಇಂಚರ
ನನ್ನೆದೆಯೊಳಗೆ ನಿನ್ನ ಪ್ರೀತಿ ನಿರಂತರ
ಹಸಿರೆಲೆಯ ಮೇಲೆ ಮಲ್ಲಿಗೆ ಓಕುಳಿ
ನನ್ನೆಸೆಯೇಯೊಳಗೆ ನಿನ್ನ ನೆನಪಿನ ಚಿಲಿಪಿಲಿ
ಕಾನನದೊಳಗೆ ಚೆಲುವಿನ ನೀರಧಾರೆ
ನನ್ನೆದೆಯೊಳಗೆ ನಿನ್ನ ಪ್ರೀತಿ ಅಮ್ರತ ಧಾರೆ
ಪ್ರಕ್ರತಿಯ ಮೇಲೆ ಹಸಿರಿನ ಎರಚಾಟ
ನನ್ನೆದೆಯೊಳಗೆ ನಿನ್ನ ನೋಡುವ ಪರದಾಟ
ನಿದಿರೆಯೊಳಗೆ ಕನಸಿನ ಸಾಮ್ರಾಜ್ಯ
ನನ್ನೆದೆಯೊಳಗಿನ ಎಲ್ಲಾ ಪ್ರೀತಿ ನಿನಗೆ ಅಜ್ಯಾ

ಮರೆತೇನಂದ್ರ ಮರೆಯಲಿ ಹ್ಯಾಂಗ.................


ಹಾಸ್ಟೆಲ್ ಎಂಬುದೇ ಒಂದು ಸುಂದರ ಪ್ರಪಂಚ.ನಾನೂ ಹಾಸ್ಟೆಲ್ ಜೀವಿ. ಅಲ್ಲಿ ನನಗೊಬ್ಬಳು ಬಜಾರಿ ಗೆಳತಿ ರಮ್ಯ;ಮಾತಿನ ಮಲ್ಲಿ. ನಮ್ಮ ವಾರ್ಡನ್ನೋ ತುಂಬಾ ಸ್ಟ್ರಿಕ್ಟ್.ಹಾಸ್ಟೆಲ್ ನಲ್ಲಿ ಸೂಜಿ ಬಿದ್ದರೂ ಕೇಳಿಸುವಂಥ ಮೌನವಿರಬೇಕೆಂದು ಆಶಿಸುವವರು.ಸದ್ದುಗದ್ದಲ ಎಂದರೆ ಅಲರ್ಜಿ. ಅಪ್ಪಿ ತಪ್ಪಿ ಕೈಯಿಂದ ಏನಾದರು ಬಿದ್ದರೆ ಅದು ಸೀಜ್ ಆಗಿಬಿಡುತ್ತದೆ.ಆ ವಸ್ತುವಿನ ಆಸೆಯನ್ನೇ ಬಿಟ್ಟು ಬಿಡಬೇಕು.
ಆ ದಿನ ರಮ್ಯಳ ಸರದಿ.ಕೈಲಿದ್ದ ಲೋಟ ಜಾರಿ ಕೆಳಗೆ ಬಿದ್ದೇ ಬಿಟ್ಟಿತು.ಸೀಜ್ ಆಜ್ಞೆಯೂ ಜಾರಿಗೆ ಬಂದಿತು. ಅದನ್ನು ಸೀಜೂ ಮಾಡಲಾಯಿತು. ಬಜಾರಿ ರಮ್ಯ ಬಿಟ್ಟಾಳೆ? "ಅದು ಬೈ ಮಿಸ್ಟೆಕ್ನಿಂದ ಬಿದ್ದಿದ್ದು. ಬೇಕೂಂತಲೇ ಬೀಳಿಸಿಲ್ಲ" ಎಂದಾಗ ವಾರ್ಡನ್ ಪೆಚ್ಚು. ಜೊತೆಗೆ ಕೆಂಗಣ್ಣಿನೊಂದಿಗೆ "ಅದೆಲ್ಲ ಗೊತ್ತಿಲ್ಲ, ಬಿದ್ದಿರುವ ಎಲ್ಲ ವಸ್ತುಗಳನ್ನು ಸೀಜ್ ಮಾಡುವುದು ನಮ್ಮ ರೂಲ್ಸ್ " ಅನ್ನಬೇಕೆ?. ಆಗ ವಾಚಾಳಿ ರಮ್ಯ "ಸರಿ ಮೇಡಂ, ನಾನೂ ಬೀಳ್ತೀನಿ.ನನ್ನನ್ನೂ ಸೀಜ್ ಮಾಡಿಬಿಡಿ" ಎಂದಾಗ ಮತ್ತೊಮ್ಮೆ ಪೆಚ್ಚಾಗುವ ಸರದಿ
ವಾರ್ಡನರದ್ದು .

Wednesday, February 3, 2010

ನನ್ನ ಮೊದಲ ಪ್ರೇಮ ಕಥೆ ..................ಕೊನೆಯದೂ


ಗೆಳೆಯಾ, ಪ್ರೀತಿ ಎಂದರೆ ಇದೇ ಅಲ್ವಾ? ಅರೆ ನಿದ್ದೆಯಲಿ ಬಿದ್ದ ಸವಿ ಕನಸಿನಂತೆ ,ಸವಿ ಕನಸು ಮುಗಿಯದಿರಲಿ ಎಂಬ ಆಶಯದಂತೆ .....ಮೊಗೆದಷ್ಟೂ ಬೇಕು ಬೇಕು ಅನಿಸುತ್ತಲೇ ಹೋಗುತ್ತದೆ.ಅದರೊಳಗೆ ಆಳವಾಗಿ ಮುಳುಗಿ ಹೋಗಬೇಕೆನಿಸುತ್ತದೆ. ಆದರೆ ಪ್ರೀತಿ ತಳವಿಲ್ಲದ ಬಾವಿಯಂತೆ.ಎಷ್ಟು ಒಳ ಹೊಕ್ಕರೂ ತಳ ತಲುಪದು.ಅದಕ್ಕೆ ತಾನೇ ಪ್ರೀತಿಯನ್ನು ಮಾಯೆ ಅನ್ನೋದು.


ಪ್ರೀತಿಯೆಂದರೆ ಏನೇನೋ ಕಲ್ಪಿಸಿಕೊಂಡಿದ್ದ ನನಗೆ ಪ್ರೀತಿಯ ಅಪೂರ್ಣ ಅರ್ಥವನ್ನು ತಿಳಿಸಿದ್ದು ನೀನು.ಸಂಪೂರ್ಣತೆ ಅರಿವಾಗದಿರಲೆಂಬ ಆಶಯ ನನ್ನದು.ಪ್ರೀತಿಯ ಸಂಪೂರ್ಣತೆಯ ಭ್ರಮೆಯಲ್ಲಿರುವವನು ಮತ್ತೆ ಪ್ರೀತಿಸಲಾರ.ಆದ್ದರಿಂದ ಅಪೂರ್ಣತೆಯೇ ನನಗಿರಲಿ.


ಪ್ರೀತಿ ಎಲ್ಲ ಶಕ್ತಿಗಳಿಗೂ ಮೀರಿದ್ದು.ಇಲ್ಲದ್ದನ್ನು ಉಂಟಾಗಿಸುವಂಥದ್ದು,ಅದು ಬದುಕಿಗೊಂದು ಗುರಿ.ನನ್ನಲ್ಲಿ ಈ ಪ್ರೀತಿ ಯಾವಾಗ ಹೇಗೆ ಅದ್ಯಾವ ಮಾಯೆಯಲ್ಲಿ ಉಂಟಾಯಿತೋ....?ನನಗಿನ್ನು ಅದು ಯಕ್ಷ ಪ್ರಶ್ನೆಯೇ. ಆದರೆ ಗುರಿಯಿಲ್ಲದ ಬಾಳಿಗೆ ದಾರಿಯಾದದ್ದು ನಿಜ.ಪ್ರೀತಿಸಲೇ ಬಾರದೆಂದು ನಿಶ್ಚಯಿಸಿದ್ದವಳಿಗೆ ಅದ್ಹೇಗೆ ಪ್ರೀತಿಯ ಮಂಕು ಬಡಿಯಿತೋ ನಾ ಕಾಣೆ.


ಪ್ರೀತಿಯೆಂದರೆ ಅಪ್ಪ -ಅಮ್ಮ ,ಅಣ್ಣ-ತಮ್ಮ ಎಂದಷ್ಟೇ ಗೊತ್ತಿದ್ದ ನಾನು ಪ್ರೀತಿಯಲ್ಲಿ ಸ್ವಾರ್ಥಿಯಾಗೆ ಬೆಳೆದೆ.ಓದಲೆಂದು ನಮ್ಮನೆಗೆ ಬಂದಿದ್ದ ನಿನಗೆ ,ಪ್ರೀತಿಯಲ್ಲಿ ನನ್ನಷ್ಟೇ ಪಾಲು ದೊರಕಿದ್ದು ಕಂಡು ಅಸೂಯೆಗೊಂಡೆ.ಅಂದಿನಿಂದಲೇ ನಿನ್ನ ದ್ವೇಷಿಸಲಾರಂಭಿಸಿದೆ.ಆದರೆ ನೀನು ಮಾತ್ರ ಪ್ರೀತಿಯ ಮೂರ್ತಿಯಂತಿದ್ದೆ.ದ್ವೇಷದ ಇನ್ನೊಂದು ಮುಖವೇ ಪ್ರೀತಿಯೆಂದು ತಿಳಿದದ್ದು ನಿನ್ನಿಂದ.


ಪ್ರೀತಿಯೆಂದರೆ ತುಂಟಾಟ,ಹ್ರದಯವನ್ನು ಗೆಲ್ಲುವ ಹೋರಾಟ,ನನಗೆಲ್ಲವೂ ನೀನೆ ಎನ್ನುವ ತ್ಯಾಗ,ನೋಟಗಳ ಮಿಳಿತ ಎಂಬಿತ್ಯಾದಿ ಹುಚ್ಚು ಕಲ್ಪನೆಗಳೇ ನನ್ನೋಳಗಿದ್ದವು . ಆದರೆ ಪ್ರೇಮವೆಂದರೆ ಇಷ್ಟೇ ಅಲ್ಲ,ಹೊಸ ಪ್ರಪಂಚವೇ ಇದೆ ಎಂದು ತೋರಿಸಿಕೊಟ್ಟವನು ನೀನು.ಅದ್ಯಾಕೋ ಇಂದೂ ನೆನಪಿದೆ, ಜ್ವರದ ಸಂಕಟದಲ್ಲಿ ಪರೀಕ್ಷೆಯ ಭಯದಲ್ಲಿ ಬೇಯುತ್ತಿದ್ದ ನನಗೆ ಸಮಾಧಾನದ ಮಳೆಯೇ ಹರಿದು ಬಂತು. ಆದರೂ ನಿರ್ಧಾರಕ್ಕೆ ಬರಲಾಗದಿದ್ದವಳಿಗೆ ತುಂಬು ಸಾಂತ್ವಾನ್ನ ನೀಡಿದ್ದು ಆ ಚಂದದ ಬೂದು ಗೋಲಿ ಕಂಗಳು.ನಡುಗುತ್ತಿದ್ದ ಕೈಗೆ ಆಧಾರವಾದ್ದು ನಿನ್ನ ಬೆಚ್ಚನೆಯ ಸ್ಪರ್ಶ.ಕೊನೆಗೂ ಜ್ವರದ ತಾಪದಲ್ಲಿ ಕೊನೆಯ ಎಕ್ಸಾಮ್ ಮುಗಿಸಿ ಪಾಸಾದದ್ದು ಆಮೇಲಿನ ಮಾತು. ಆದರೆ ಪ್ರೀತಿಯ ಪರೀಕ್ಷೆ ಆರಂಭವಾದದ್ದು ಇಲ್ಲಿಂದಲೇ...........


ನೀನೆನೆಂಬುದು ನನಗಿನ್ನೂ ಅರ್ಥವೇ ಆಗಿಲ್ಲ ಕಣೋ.ನಿನ್ನ ಪ್ರೀತಿ ಗಂಭೀರವಾಗಿ ಹರಿಯುವ ನದಿಯಂತೆ ಪ್ರಶಾಂತ.ರಮಣೀಯ ಪ್ರಕ್ರತಿಯೊಳಗಿನ ಅಚ್ಚರಿಯಂತೆ ರಹಸ್ಯ.ಆಳವಾಗಿ ಹೋದಷ್ಟು ಎಷ್ಟೋ ಅದ್ಭುತ.ಇಷ್ಟೊಂದು ಪ್ರೀತಿಸಲು ಸಾಧ್ಯಾನ ಎಂಬ ಅಚ್ಚರಿ.ನಿನ್ನ ಪ್ರೀತಿ ಗುಪ್ತ ಗಾಮಿನಿಯಂತೆ ನಿಶ್ಯಬ್ದ ;ನಿರಂತರ......... ಅದೆಷ್ಟೋ ಬಾರಿ ಅಂದುಕೊಂಡಿದ್ದೇನೆ ನನ್ನೋಳಗಿಂದಲೇ ನಾ ದೂರವಾಗಿ ನಿನ್ನೊಳಗೆ ಸೇರಲು ಸಾಧ್ಯವಾಗಿದ್ದರೆ......?ಎಂದು, ಎಷ್ಟು ಮಧುರ ಅಲ್ವೇನೋ?


ಅದ್ಯಾಕೋ ಗೆಳೆಯಾ, ನಿನ್ನ ಪ್ರೀತಿಯಲ್ಲಿ ತುಂಟತನಕ್ಕಿನ್ತಲೂ ಜವಾಬ್ದಾರಿಯೇ ಹೆಚ್ಚು?ನಾನು ಸಣ್ಣ ಹುಡುಗಿಯಂತೆ ಪೋಕಿರಿಯಾದರೆ,ನೀನು ಜವಾಬ್ದಾರಿ ಹೊತ್ತಿರುವ ಅಪ್ಪನಂತೆ ಗಂಭೀರ.ನೀನು ತುಂಬಾ ಬ್ಯುಸಿಯಾಗಿರುವಾಗ ಒಂದು ಕಾಲ್ ರಿಸೀವ್ ಮಾಡದಿದ್ದರೆ ನಿಂಗೆ ನನ್ಮೇಲೆ ಪ್ರೀತಿನೆ ಇಲ್ಲ ಎಂದು ನಾ ಮುನಿಯುತ್ತೇನೆ;ಕೋಪದ ಧಾರೆಯನ್ನೇ ಹರಿಸುತ್ತೇನೆ.ಆದರೆ ನೀನು "ನನಗರ್ಥ ಆಗುತ್ತೋ ತುಂಬಾ ಬ್ಯುಸಿಯಲ್ವಾ?ಚೆನ್ನಾಗಿ ಓದು"ಎಂದು ನಂಗೆ ಸಮಾಧಾನ ಮಾಡ್ತಿಯಲ್ವಾ? ಇಷ್ಟು ತಾಳ್ಮೆನ ಯಾರಿಂದಲೋ ಕಲಿತದ್ದು?


ಚೆಲ್ಲಾಟವಾಡದೆ ಗಂಭೀರವಾಗಿರೋ ನಿನ್ನ ವ್ಯಕ್ತಿತ್ವದೆದುರು, ಸ್ವಾರ್ಥವಿಲ್ಲದ ನಿಸ್ವಾರ್ಥ ಹ್ರದಯದೆದುರು ,ಒಲವನ್ನೆಲ್ಲ ತುಂಬಿಕೊಂಡಿರುವ ನಿನ್ನ ಕಂಗಳೆದುರು ನಾನದೆಷ್ಟು ಸಣ್ಣವಳು ಗೊತ್ತ?ಅದೆಷ್ಟೋ ಸಾರಿ ನನ್ನ ಹುಡುಗ ಎಷ್ಟು ಒಳ್ಳೆಯವನಲ್ವಾಂತ ಹೆಮ್ಮೆ ಪಟ್ಟಿದ್ದೀನಿ.ಛೆ! ನಂಗೆ ಹಾಗಿರೋಕೆ ಬರಲ್ವಲ್ಲಾಂತ ಅಸೂಯೇನು ಪಟ್ಟಿದ್ದೀನಿ.ಗೊತ್ತೇನೋ?


ಬುದ್ದಿ ತಿಳಿದಾಗಿನಿಂದ ಹ್ರದಯ ಅರಳಿದ್ದು ನಿನ್ನೋರ್ವನನ್ನೇ ಕಂಡು.ಪ್ರೇಮ ಕಥೆ ಶುರುವಾಗಿದ್ದು ನಿನ್ನಿಂದಲೇ....ಇದುವೇ ನನ್ನ ಮೊದಲ ಪ್ರೇಮಕಥೆಯ ಆರಂಭವೂ ಅಂತ್ಯವೂ ಆಗಿರಲೆಂದು ಆಶಿಸುತ್ತೇನೆ.ಇದುವೇ ನಾ ನಿನ್ನ ಮ್ರದು -ಮಧುರ ಪ್ರೀತಿಗೆ ನೀಡುವ ಉಡುಗೊರೆ ಕಣೋ........


ಇದೇ ನನ್ನ ಮೊದಲ ಪ್ರೇಮ ಕಥೆ .................ಕೊನೆಯದೂ.

Tuesday, February 2, 2010

ಭಾವದ ಅಲೆಗಳ ಮೇಲೆ ...........


ತಂಪು ತಂಪು ಸಂಜೆಯಲಿ ತಂಗಾಳಿ ಹಿತವಾಗಿ ಸುಳಿಯುತ್ತಿತ್ತು...... ಜೊತೆಗೆ ಮನದಲ್ಲಿ ನಿನ್ನ ನೆನಪೂ.. ಆಗಸದಲ್ಲಿ ಸೂರ್ಯನು ಕಂದಿದಂತೆ,ನಿನ್ನೆಡೆಗಿನ ನನ್ನೊಳಗಿನ ಭಾವಗಳು ಮಿಂಚುತ್ತಿವೆ. ಇವತ್ಯಾಕೋ ನೀ ತುಂಬಾ ಕಾಡ್ತಿದ್ದಿಯೋ...ಜನಸಂತೆಯೊಳಗಿಂದ ನಿನ ನೆನಪುಗಳ ಜಾತ್ರೆಯಲಿ ಮನಸೋ ಇಚ್ಛೆ ಅಲೆದಾಡ್ಬೇಕೆಂಬ ಆಸೆ ಅತಿಯಾಗ್ತಿದೆ. ಯಾಕೋ ಗೊತ್ತಿಲ್ಲ ಏಕಾಂತವೇ ಪ್ರಿಯವಾಗ್ತಿದೆ ಕಣೋ.

ಅಂದು ಮೊದಲ ಬಾರಿಗೆ ನಿನ್ನ ನೋಡಿದಾಗಲೇ ಕಣ್ ಮಿಂಚೊಳಗೆ ನಾ ಸೇರಿ ಹೋಗಿದ್ದೆ.ಆ ಕಂದು ಗೋಲಿ ಕಣ್ಗಳನ್ನು ನೋಡುತ್ತಲೇ ಪ್ರೀತಿಯ ಬಲೆಯಲ್ಲಿ ಸಿಲುಕಿದ್ದೆ.ನಿನ್ನ ಕಣ್ಗಳ ಬೆಳಕಿನಲ್ಲೇ ೫ ವರ್ಷಗಳನ್ನು ಖುಷಿಯಿಂದಲೇ ಕಳೆದಿದ್ದೆ.ಆದರೆ ಇನ್ದ್ಯಾಕೋ ತುಂಬಾ ಒಂಟಿಯಾಗ್ಬಿಟ್ಟೆ ಅನಿಸ್ತಿದೆ ಕಣೋ.

ನಿನ್ನ ಆ ತಂಪು ತಂಪು ನಗುವಿಲ್ಲ, ಕಣ್ ಮಿಂಚಿಲ್ಲ,ಸವಿ ಮಾತಿಲ್ಲ.ಭಾವನೆಗಳೇ ಇಲ್ಲದೆ ನಿನ್ನದೇ ಲೋಕದಲ್ಲಿ ಮುಳುಗಿ ಹೋಗಿದ್ದಿಯಲ್ಲ? ಆದರೂ ನಿನ್ನ ಅರ್ಥ ಮಾಡ್ಕೊತೀನೋ ...ಯಾಕೆಂದ್ರೆ ನಾ ನಿನ್ನ ತುಂಬಾ ಪ್ರೀತಿಸ್ತೀನಿ.ನೀನು ನಿನ್ನ ಕೆಲ್ಸಾನ್ನ ಪ್ರೀತಿಸೊದಕ್ಕಿನ್ತಲೂ ಹೆಚ್ಚು.ಆದರೂ ಗೆಳೆಯಾ, ನಿನ್ನ ಯಾಂತ್ರಿಕತೆ ನನ್ನಲ್ಲಿ ಭಯದ ಕಿಚ್ಚೆಬ್ಬಿಸುತ್ತದೆ. ಮನದ ಭಾವಗಳು ಗೊಂದಲದ ಗೂಡಾಗುತ್ತವೆ. ನಿನ್ನ ಒಲುಮೆಗಾಗಿ ಹ್ರದಯ ನರಳುತ್ತದೆ.ನನ್ನ ಮನದ ಗಾಯಕ್ಕೆ ನೀನೊಬ್ಬನೇ ವೈದ್ಯ.ನನ್ನೆದೆಯೊಳಗಿನ ಪ್ರಶ್ನೆಗೆ ನೀನೊಬ್ಬನೇ ಉತ್ತರ ಹೇಳಬಲ್ಲೆ. ರಸಹೀನವಾದ ಯಾಂತ್ರಿಕ ಲೋಕದಿಂದ ಭಾವ ಲೋಕದೊಳಗೆ ಒಮ್ಮೆ ಬಂದು ಬಿಡೋ......ಆಗ ಮಾತ್ರ ಈ ನನ್ನ ಹುಚ್ಚು ಪ್ರೀತಿಗೊಂದು ಅರ್ಥ ಬರೋದು ......ಮನದ ಮಾತೆಲ್ಲಾ ಹಾಡಾಗೋದು..................

Monday, February 1, 2010

ಗೆಳೆತನದಲ್ಲಿ ಹೀಗ್ಯಾಕೆ?

ಸ್ನೇಹಕ್ಕೆ ಮೀರಿದ ಭಾವ ಮತ್ತೊಂದಿಲ್ಲ; ಅದು ನಿಷ್ಕಲ್ಮಶ .ಗೆಳೆತನದಲ್ಲಿ ಸಿಗೋ ನಿರಾಳತೆ ಮತ್ಯಾವ ಸಂಬಂಧದಲ್ಲೂ ಸಿಗೋಲ್ಲ. ಅದೊಂದು ಸಹಜ ಸುಂದರ ಅನುಬಂಧ. ಭಾವನಾತ್ಮಕವಾಗಿ ಯೋಚಿಸಿದರೆ ಇದೆಲ್ಲಾ ನಿಜ.ಆದರೆ ವಾಸ್ತವದಲ್ಲಿ......?. ಯಾವುದೇ ಕಾರ್ಯ ಕಾರಣವಿಲ್ಲದೆ ಕಾಲವೆಂಬ ಮಧ್ಯಂತರ ಸ್ನೇಹ ಎಂಬ ಬಂಧದಲ್ಲಿ ಬಿರುಕು ಮುಡಿಸುತ್ತಾ ಹೋಗುತ್ತದೆ.ಕ್ರಮೇಣ ಸ್ನೇಹ ಎಂಬ ಪದಕ್ಕೆ ಅರ್ಥವೇ ಇಲ್ಲವಾಗುತ್ತದೆ.
ನಾನೂ ಸ್ನೇಹವನ್ನು ಅತಿಯಾಗಿ ನಂಬಿದವಳು. ಯಾವ ಸಂಭಂದವೂ ಹಾಳಾದೀತು ಸ್ನೇಹ ಮಾತ್ರ ಸಾಯೋದಿಲ್ಲ ,ಅದು ಎಂದಿಗೂ ತುಂಡಾಗದ ಸಂಕೋಲೆ ಎಂಬಿತ್ಯಾದಿ ಕಲ್ಪನೆಗಳನ್ನು ತುಂಬಿ ಕೊಂಡವಳು.ಆದರೆ ವಾಸ್ತವತೆ ನನ್ನೆಲ್ಲಾ ಹುಚ್ಹು ಕಲ್ಪನೆಗಳಿಗೆ ಉತ್ತರವಾಯಿತು.
ನನಗು ಒಬ್ಬ ಬಾಲ್ಯ ಗೆಳೆಯನಿದ್ದ. ಎಲ್ಲ ವಿಷಯಗಳನ್ನು ಯಾವುದೇ ಮುಚ್ಚು ಮರೆಯಿಲ್ಲದೆ ಹಂಚಿಕೊಂಡವರು.ಸುಖ ದುಖಗಳಲ್ಲಿ ಸಮಾನ ಪಾಲುದಾರರು. ಆಗ ಅವನೆಂದರೆ ಸ್ನೇಹ, ಸ್ನೇಹ ಎಂದರೆ ಅವನು ಎಂಬಸ್ತು ಘಟ್ಟಿಯಾಗಿತ್ತು ನಮ್ಮ ಬಂಧ.ಪದವಿ ಶಿಕ್ಷಣದ ಸಂದರ್ಭದಲ್ಲಿ ಈರ್ವರ ದಾರಿ ಕವಲೊಡೆಯಿತು.ಆದರೂ ಅದು ನಮ್ಮ ಸ್ನೇಹಕ್ಕೆ ತಡೆಗೋಡೆಯಾಗಲಾರದು ಎಂದು ನಾನು ನಂಬಿದ್ದೆ.ಆದರೆ ಸ್ನೇಹದಲ್ಲಿ ಹೇಗೆಲ್ಲಾ ಬಿರುಕು ಮೂಡಬಹುದು ,ಸ್ನೇಹ ಸಂಕೋಲೆ ಯಾಕೆ ತುಂಡಾಗಬಹುದೆಂದು ತಿಳಿದದ್ದು ಆಗಲೇ.
ಅದೊಂದು ದಿನ ಕೆಲವು ತಿಂಗಳ ಬಳಿಕ ತಡೆಯಲಾರದೆ ನಾನೇ ಅವನಿಗೆ ಫೋನಾಯಿಸಿದ್ದೆ.ಸ್ವಲ್ಪ ಮಾತನಾಡಿದ ಅವನು 'ಸ್ವಲ್ಪ ಬ್ಯುಸಿ ಕಣೆ ಆಮೇಲೆ ನಾನೇ ಮಾಡ್ತೀನಿ' ಅಂದ. ಅವನ ಕರೆಗೆ ಕಾದಿದ್ದೆ ಕಾದಿದ್ದು.ಕಾಲ್ ಬರಲೇ ಇಲ್ಲ. ಆಗ ಶುರುವಾಯಿತು ನೋಡಿ 'ಇಗೋ ಪ್ರಾಬ್ಲಂ .,ನಾನ್ಯಾಕೆ ಮಾಡಲಿ ಎಂಬ ಸಣ್ಣ ಭಾವವೇ ಸ್ನೇಹಕ್ಕೆ ಕಂಟಕವಾಯಿತು.ವರ್ಷದ ಬಳಿಕ ನಾನೇ ಕಾಲ್ ಮಾಡೋಣಾ ಅಂದ್ರು ನಾನೇ ಬ್ಯುಸಿಯಾಗಿ ಬಿಟ್ಟೆ.ನಾಳೆ ನಾಳೆ ಎಂದೆನ್ನುತ್ತ ಕಂದಕ ಬೆಳೆಯುತ್ತಾ ಹೋಯಿತು.ಅವ್ನು ಕಾಲ್ ಮಾಡದೇ ಇರೋದಕ್ಕೆ ಹಲವು ಕಾರಣಗಳನ್ನೂ ಯೋಚಿಸಿದೆ.'ನನಗಿಂತಲೂ ಉತ್ತಮ ಗೆಳತಿ ದೊರಕಿರಬೇಕು ,ಅದಕ್ಕೆ ನನ್ನ ನೆನಪಿರಲಾರದು' ಎಂದುಕೊಂಡ ಮನಸ್ಸಿಗೆ ಪಿಚ್ಚೆನಿಸಿತು.ಸರಿ, ಅವನು ಅವನಷ್ಟಕ್ಕೆ ಹಾಯಾಗಿರಲಿ ಅಂದುಕೊಂದು ನಾನು ಹೊಸ ಗೆಳೆಯರ ತಲಾಷೆಯಲ್ಲಿ ತೊಡಗಿದೆ.ಕ್ರಮೇಣ ಸಂಪೂರ್ಣ ಅಲ್ಲದಿದ್ದರೂ, ಚಂದದ ಸುಂದರ ಗೆಳೆತನವನ್ನು ಮರೆಯುತ್ತಾ ಹೋದೆ.ಅಲ್ಲಿಗೆ ಒಂದು ಸ್ನೇಹ ಸಂಬಧದ ಕೊಲೆಯಾಗಿತ್ತು.
ಹೀಗೆ ಸ್ನೇಹದಲ್ಲಿ ಮೂಡುವ ಸಣ್ಣ ಬಿರುಕು ಭದ್ರ ಬುನಾದಿಯನ್ನೇ ಅಲ್ಲಾಡಿಸಿ ಬಿಡುತ್ತದೆ.ಸ್ನೇಹವನ್ನು ಮುಂದುವರಿಸಿಕೊಂಡು ಹೋಗುವುದು ಒಂದು ಕಲೆ,ಅದನ್ನು ಬೆಳೆಸಿಕೊಳ್ಳಬೇಕು.ಆಗ ಮಾತ್ರ ಸ್ನೇಹ ಚಿರಾಯುವಾಗಬಹುದು ..........ಅಲ್ಲವೇ?

Sunday, January 31, 2010

ಭೂಮಿ

ಗೆಳತೀ,
ನೀ ಪ್ರೀತಿಯಲಿ
'ಭೂಮಿ '
ನಾ ಅದರೊಳಗೆ
ಮುಳುಗಿರುವ
'ಅಂತರ್ಗಾಮಿ '

ಜೋ(ಜ)ಗಳ

ಆರಂಭದಲ್ಲಿ ಅವಳ
ಮಾತು ಅವನಿಗೆ 'ಜೋಗುಳ'
ಕಾಲ ಕ್ರಮೇಣ
ಅವಳ ಮಾತೆಂದರೆ
ಶುರುವಾಯಿತು 'ಜಗಳ'

ಕೋರಿಕೆ

ಮನದ ಮಾತಾಗಿ
ಎದೆಯ ಬಡಿತವಾಗಿ
ಭಾವದ ತುಡಿತವಾಗಿ
ನೀ ನನ್ನೊಳಗಿರು
ನನ್ನೊಲವೆ
'ನನ್ನವನೇ'

ಕೋರಿಕೆ

ಹೊಂದಾಣಿಕೆ

ಅವರಲ್ಲಿಲ್ಲ ಹೊಂದಾಣಿಕೆ
ಪ್ರೀತಿಯಲ್ಲೂ 'ಇಳಿಕೆ '
ಕಾರಣ ,
ಇಳಿಯುತ್ತಿರುವುದಲ್ಲಾ
ಅವನ 'ಗಳಿಕೆ '

ವಿನಂತಿ

ನನ್ನೆದೆಯೊಳಗೆ ನಿನ್ನ
ನೆನಪಿನ ಘಮಲು
ಹ್ರದಯ ಕೋಟೆಯಲಿ
ಚೆಲ್ಲಾಡಿದೆ ಪ್ರೀತಿಯ ಅಮಲು
ಪ್ರೀಮ ಕುಸುಮ ಅರಳಿದೆ
ಹ್ರದಯ ದಾರಿಯಲಿ ನೀ ಬರಲು
ಗೆಳೆಯಾ,
ಬಂದು ಬಿಡು ಬಲು ಬೇಗ
ನನ್ನ ಸೇರಲು......

Thursday, January 28, 2010

ನಗು

ಕೋಪವೆಂಬ
ರೋಗವನ್ನು
ನಾಶಮಾಡುವ
'ಟಾನಿಕ್ '

ಕವನ

ಭಾವ ಭಂಡಾರ
ಬಿಚ್ಚಿಡುವ
ತಿಜೋರಿ

ಲಹರಿ

ನನ್ನೊಳಗೆ ನಿನ್ನೊಲವ
ಲಹರಿ
ನಿನ್ನಿಂದಲೇ ಪ್ರೀತಿಯ
ಭಾವ ಸವಾರಿ

Tuesday, January 26, 2010

ಪ್ರಶ್ನೆ

ತಾಳಿದವನು
ಬಾಳಿಯಾನು
ನಿಜ-ಆದರೆ
ಬಾಳುವವನು
ತಾಳಿಯಾನೆ...?




Monday, January 25, 2010

ಕೋರಿಕೆ

ನಿನ್ನೊಲವ ಸುರಿಮಳೆಗೆ

ಹಂಬಲಿಸಿ ಕಾದಿಹುದು ಈ ಮನ

ನೀ ಬರುವ ಹಾಡಿಗೆ

ಪ್ರೀತಿ ಚುಕ್ಕೆಯಿಟ್ಟು

ಒಲವ ರಂಗೋಲಿ ಬಿಡಿಸಿ

ಕಾದಿರುವೆ ನಾ

ಮನದೊಳಗಣ

ಬೆಚ್ಚನೆಯ ಭಾವ ಗರಿಗೆದರಿ ಲಾಸ್ಯವಾಡಲು

ತಾಳಲಿ ಹೇಗೆ ಈ ವಿರಹವಾ?

ಇನಿಯಾ, ಲಯ ತಪ್ಪಿರುವ

ಈ ಹ್ರದಯ ತಂತಿಯ

ನೀ ಮೀತ ಬಲ್ಲೆಯಾ?

ಕೋರಿಕೆ

ಅಂದು-ಇಂದು

ಅಂದು ಹೇಳುತ್ತಿದ್ದರು
ಮಾತೇ ಮಾಣಿಕ್ಯ
ಏಕೆಂದರೆ ಮಾತು ಕಡಿಮೆ ಮಾಡಲು
ಇಂದೂ ಹೇಳುತ್ತಾರೆ
ಮಾತೇ ಮಾಣಿಕ್ಯ
ಕಾರಣ
ಫೋನ್ ಬಿಲ್ ಕಡಿಮೆ ಮಾಡಲು

Friday, January 22, 2010

ಪ್ರೀತೀ............... ಹೀಗೇಕೆ ಕಾಡುವೆ?


ಗೆಳೆಯಾ,
ಈ ಪ್ರೀತಿಯೇ ಹಾಗೆ.ಎಲ್ಲವನ್ನೂ ಕೊಚ್ಚಿ ಹಾಕುವಂಥದ್ದು. ನಿನ್ನೊಲವ ಅಲೆಯೊಳಗೆ ಸಿಲುಕಿದ್ದ ನನಗೆ ಬೇರೇನೂ ಬೇಡವಾಗಿತ್ತು. ಎಲ್ಲವೂ ನೀನಾಗಿದ್ದೆ. ನೀ ನನ್ನೊಳಗಿನ ಭಾವಸೆಲೆಯಾಗಿದ್ದೆ. ಎನ್ನೊಳಗೆ ಅರಳಿದ ಎಲ್ಲಾ ಕಾವ್ಯಗಳಿಗೆ ಸ್ಪೂತರ್ಿಯಾಗಿದ್ದೆ. ನಿನ್ನ ಪ್ರೇಮವೇ ಅಂಥದ್ದು.ಕಲ್ಲನ್ನೂ ಕರಗಿಸುವಂಥದ್ದು.ಅದಕ್ಕೇ ಗೆಳೆಯಾ, ನನ್ನೊಳಗಿನ ಭಾವಭಂಡಾರ ನಿನ್ನೆಡೆಗೆ ಹರಿದದು.್ದ ನಿನ್ನ ಪ್ರೀತಿಯ ಕೋಹಿನೂರ್ ನನ್ನೊಲವ ಆಭರಣವಾದದ್ದು.
ನನ್ನೊಲವ ಪ್ರೇಮದ ಬರಗಾಲಕ್ಕೆ ನಿನ ಪ್ರೀತಿಯೇ ನೆರೆಯಾದದ್ದು.ನನ್ನ ಖಾಲಿ ಖಾಲಿ ಹೃದಯದೊಳಗೆ ನೀನು ಪೂತರ್ಿ ಪೂತರ್ಿ ತುಂಬಿ ಹೋಗಿದ್ದೆಯಲ್ಲಾ? ಅಂದೇ ನಿನ್ನ ಪ್ರೀತಿಯ ಬೆಲೆ ನಾನರಿತದ್ದು. ನನ್ನ ಕುರುಡು ಪ್ರೀತಿಗೆ ನಿನ್ನೊಲವೇ ದಾರಿ ತೋರುವ ಅಮರ ಜ್ಯೋತಿ. ಒಲವೆಂದರೆ ಇದೇ ಅಲ್ವಾ? ಈ ಜಗದೊಳಗಿನ ಸುಮಕ್ಕಿಂತ ಮಾಧುರ್ಯ.ನನ್ನೊಂದಿಗೆ ನೀನಿದ್ದ ಕ್ಷಣವೆಲ್ಲಾ ಒಲವಿನ ಸಾಮ್ರಾಜ್ಯದೊಳಗೆ ಮೆರೆದಂಥ ಅನುಭವ. ಆ ಮಧುರತೆ ಕನಸಿನ ರಂಗುರಂಗಿನ ಗುಂಗು ಮಾತ್ರ ನಿರಂತರ...............ಕೊನೆ ಬಯಸುವುದೇ ಇಲ್ಲ. ನೀ ಅನುಕ್ಷಣ ಬಳಿಯಿರಬೇಕೆಂಬುದೇ ಈ ಉಸಿರಿನ ಕಾತರ. ನಿನ್ನೊಲವಿನ ಶರಧಿಯೊಳಗೆ ಮುಳುಗಿ ಹೋಗಬೇಕೆಂಬ ಬಯಕೆ ಮಾತ್ರ ನಿರಂತರ. ನಿನ್ನ ಪ್ರೀತಿ ನನ್ನ ಬಾಳ ಕಾವ್ಯಕೆ ಬರೆದ ಒಲವಿನ ಭಾಷ್ಯ. ಅದೊಂದು ಬಾಳ ಬೆಂಗಾಡಿನಲಿ ದೊರೆತ ನೀರ ಚಿಲುಮೆಯಂತೆ.
ಇದ್ಯಾಕೋ ಗೆಳೆಯಾ ಹೀಗೆ ಕಾಡುವೆ?ನನ್ನ ಈ ಒಲವಿನ ಕಾದಂಬರಿಗೆ ಪೂರ್ಣವಿರಾಮ ಹಾಕುವಿಯೆಂಬ ನಿರೀಕ್ಷೆಯಲ್ಲಿ..........
ನಿನ್ನೊಲವಿನ ಗೆಳತಿ

ಪ್ರೇಮಿ

ಖಾಲಿ ಖಾಲಿ ಮನದೊಳಗೆ
ಕನಸಿನ ಅಂಬಾರಿಯಲಿ ಬಂದು
ಹೃದಯ ಕೋಟೆಯೊಳಗೆ ಭದ್ರವಾಗಿ ಕುಳಿತು
ಎಡೆ ಬಿಡದೆ ಕಾಡಿದವನು

ಹೋಲಿಕೆ

ನನ್ನವಳು ನಕ್ಕರೆ
ಅದೇನೋ ಮತ್ತು
ಅತ್ತರೆ ಥೇಟ್
ಮಾರಿ ಮುತ್ತು

ಉಷೋದಯ

ನಿದಿರೆ ಒಡೆದಿತ್ತು
ಕನಸು ಚಿಗುರಿತ್ತು
ಭಾವ ಅರಳಿತ್ತು
ಕ್ರೂರ ಭೀಭತ್ಸತೆಯ ಮೇಲೆ
ಮನಸು ಕೂಡಿತು
ಹೃದಯ ಮೀಟಿತ್ತು
ಒಲವು ಹರಿದಿತ್ತು
ನಿಲರ್ಿಪ್ತ ವಿಕರತೆಯ ಮೇಲೆ
ಬೆಳಕು ಹರಿದಿತ್ತು
ಜ್ಷಾನ ಬಂದಿತ್ತು
ಹಗಲು ಮೂಡಿತ್ತು
ಗಾಢ ಕರಾಳತೆಯ ಮೇಲೆ
ಕಹಿಯು-ಸಿಹಿಯಾಗಿ
ಮುಳ್ಳು-ಹೂವಾಗಿ
ವಿಷವು ಮಧುವಾಗಿ
ನಿಷೆಯು ಉಷೆಯಾಯಿತು ಆಗ

ಪ್ರಶ್ನೆ

ನೀ ಹಾಲಾದರೆ
ನಾ ಜೇನು
ನೀ ಹಕ್ಕಿಯಾದರೆ
ನಾ ಬಾನು
ನೀ ಹೃದಯವಾದರೆ
ನಾ ಬಡಿತ
ನೀ ಒಲವಾದರೆ
ನಾ ಮಿಡಿತ
ಆದರೆ ಗೆಳೆಯಾ
ಎಂದು ಕೊನೆಯಾಗುವುದು
ನಾನು ನೀನಾಗುವ
"ತುಡಿತ'?

ಪ್ರೀತಿ

ನನ್ನೆದೆಯ ಮರುಭೂಮಿಯಲಿ
ನಿನ್ನೊಲವ ಒರತೆ ಚಿಮ್ಮಿದೆ
ನೊಂದಬಾಳ ಬೆಂಗಾಡಿನಲಿ
ಪ್ರೀತಿ ತಂಗಾಳಿ ಸುಳಿದಾಡಿದೆ
ಕಷ್ಟಕಾರ್ಪಣ್ಯಗಳ ದುರ್ಗಂಧದಲಿ
ಪ್ರೀತಿಸುಮ ಪರಿಮಳ ಬೀರಿದೆ
ಕನಸಿಲ್ಲದ ಶೂನ್ಯ ಬದುಕಿನಲಿ
ಬಾಳಪೂರ್ಣತೆಯು ನನಸಾಗಿದೆ
ಗೊತ್ತುಗುರಿಯಿಲ್ಲದ ಜೀವನದಲಿ
ಭಾವಕುಸುಮ ಅರಳಿ ನಿಂತಿದೆ
ನಿಂತನೀರಾಗಿರುವ ಜೀವಕೊಳದಲಿ
ಭಾವಪ್ರವಾಹ ಸಂಚಾರವಾಗಿದೆ
ಖಾಲಿ ಬಾಳ ಬರಡು ಬಯಲಲಿ
ಪ್ರಿತಿಯ ಹಸಿರು ಆವರಿಸಿದೆ
ಜೀವದ ಬರಗಾಲದ ಬಯಾರಿಕೆಗೆ
ಒಲವ ತಣ್ಣೀರ ಸಿಂಚನವಾಗಿದೆ
ಆಧಾರವಿಲ್ಲದ ನಿಸ್ಸಾರ ಬಾಳ ನೌಕೆಗೆ
ನಿಷ್ಕಲ್ಮಷ ಹೃದಯ ಊರುಗೋಲಾಗಿದೆ
ಹಳಸು ಶುಷ್ಕ ಬಾಳಕಾವ್ಯಕೆ
ಮುಗ್ಧಮನ ಮೃಷ್ಟಾನ್ನ ಸಾಹಿತ್ಯವಾಗಿದೆ
ಶೂನ್ಯತೆ ಪರಿಪೂರ್ಣತೆಯಾಗಿದೆ
ಬಾಳು ನಂದನವಾಗಿದೆ