Thursday, February 25, 2010

ವನ್ ಮಿಸ್ಡ್ ಕಾಲ್




ಅದ್ಯಾಕೋ ಫ್ರೆಂಡ್ ,ಸ್ನೇಹದ ಪರಿಪೂರ್ಣತೆಯ ರುಚಿಯನ್ನು ನೀಡಿ ಆಸ್ವಾದಿಸುವ ಮೊದಲೇ ನನ್ನಿಂದ ಮರೆಯಾಗಿ ಹೋದದ್ದು? ಫ್ರೆಂಡ್ಶಿಪ್ ಅನ್ನೋದು ಕೇವಲ ಹುಡುಗಿಯರೊಂದಿಗೆ ಮಾತ್ರ ಅನ್ನೋ ನನ್ನ ಫೀಲಿಂಗ್ಸ್ ನ ದೂರ ಮಾಡಿ ನನ್ನಿಂದಲೇ ದೂರವಾಗಿ ಹೋದದ್ದು ?



ಕಾರಿಡಾರಿನಲ್ಲಿ ನನ್ನಷ್ಟಕ್ಕೆ ನಾ ನಿಂತಿದ್ದಾಗ ನೀನೆ ನೀನಾಗಿ ಬಂದು ' ಐ ವಾಂಟ್ ಯುವರ್ ಪ್ರೆಂಡ್ ಶಿಪ್ ' ಎಂದು ಕೈ ಚಾಚಿದಾಗ ಗಲಿಬಿಲಿಗೊಂಡಿದ್ದೆ. ಆರು ತಿಂಗಳಿಂದಲೂ ನಿನ್ನ ಕಂಗಳು ನನ್ನ ಗಮನಿಸ್ತಿದ್ದನ್ನು ಗುರುತಿಸಿದ್ದೆ. ಕೊನೆಗೂ ಫ್ರೆಂಡ್ಶಿಪ್ ಗೋಸ್ಕರ ತಾನೇ ಎಂದು ಕೈ ಚಾಚಿದ್ದೆ. "ಎಲ್ಲರಂತೆ ಇವ್ನು ಒಬ್ಬ "ಅಂದ್ಕೊಂಡಿದ್ದ ನನಗೆ ಕ್ರಮೇಣ ನಿನ್ನಂತ ಸ್ನೇಹಿತನ್ನ ಪಡೆಯೋಕು ಅದ್ರಷ್ಟ ಬೇಕು ಅಂತ ಅನಿಸಿದ್ದಂತು ನಿಜ.


ನಿನ್ನ ಆ ಸಣ್ಣ ಪುಟ್ಟ ತ್ಯಾಗಗಳು, ತುಂಟ ತುಂಟ ಪ್ರಶ್ನೆಗಳು, ಹೊಡೆದಾಟ ,ಕೋಳಿಜಗಳ ಎಲ್ಲವು ನನಗೆ ಪ್ರಾಣವಾಗಿತ್ತು. ಅದೊಂದು ದಿನ' ಕಾಲೆಜಲ್ಲಿರೋ ಇಷ್ಟು ಮಂದಿಯಲ್ಲಿ ನನ್ನನ್ನೇ ಯಾಕೆ ಫ್ರೆಂಡ್ ಅಗ್ಬೇಕುಂತ ನೀ ಆಸೆ ಪಟ್ಟಿದ್ದು 'ಇಂದು ನಾ ಪ್ರಶ್ನಿಸಿದಾಗ ನೀನು ಕೊಟ್ಟ ಉತ್ತರ ನನ್ನ ಚಕಿತಗೊಳಿಸಿತ್ತು. "ನಿನ್ನ ಕಂಗಳು ನನ್ನಮ್ಮನ್ ಥರ. ನಿನ್ನ ನೋಡಿದರೆ ನನ್ನಮ್ಮನ ನೆನಪು ಬರುತ್ತೆ 'ಅಂದಿದ್ಯಲ್ವಾ ಗೆಳೆಯ? ಯಾರಿಗೂ ಬಂದೊದಗದ ಭಾಗ್ಯ ನನ್ನದಾಗಿತ್ತು.ನಿನಗೆ ಫ್ರೆಂಡ್ -ಅಮ್ಮ- ತಂಗಿ ನಾನಾಗಿದ್ರೆ ನನ್ನೆಲ್ಲ ಪ್ರಶ್ನೆಗಳಿಗೆ, ನೋವಿಗೆ ಉತ್ತರ ನೀನಾಗಿದ್ದೆ; ಸಾಂತ್ವನ ನಿನ್ನದಾಗಿತ್ತು. ಆದರೆ ಈಗ ನಿನ್ನೊಂದಿಗೆ ಎಲ್ಲರು ಇದ್ದಾರೆ; ನನ್ನನ್ನು ಬಿಟ್ಟು, ಇದೆ ಅಲ್ವಾ ವಿಪರ್ಯಾಸ?


ಯಾರನ್ನು ಏನನ್ನು ಹಚ್ಚಿಕೊಳ್ಳದ ನಾನು ನಿನ್ನ ವಿಪರೀತ ನೆಚ್ಚಿಕೊಂಡಿದ್ದೆ. ನೀ ಒಂದಿನ ಕಾಲೇಜಿಗೆ ಬರದಿದ್ರೂ 'ಛೆ! ಏನೋ ಇಲ್ವಲ್ಲಾಂತ ಅನಿಸ್ತಿತ್ತು". ನನ್ನೆಲ್ಲ ದಿನಚರಿಯನ್ನು ಬಡ ಬಡ ನಿನಗೊಪ್ಪಿಸ್ತಿದ್ರೆ ನೀನು ದಿವ್ಯ ಮುನಿ. ಕೇವಲ ಕಿರುನಗೆಯೊಂದೆ ನಿನ್ನುತ್ತರ. ನಾನು ಮಾತಿನ ಮಲ್ಲಿಯಾದರೆ ನೀನು ಬಾಯಿಬಾರದ ಮೂಕ. ನನ್ನೆಲ್ಲ ಗೆಲುವುಗಳಿಗೆ ನಿನ್ನದೊಂದು ಕಿರುನಗೆ ಉತ್ತರವಾಗಿದ್ದರು ಸೋತಾಗ ನೀ ನೀಡಿದ್ದ ಸಾಂತ್ವಾನ, ಆಸರೆ ಮರೆಯಲಸಾಧ್ಯ. ಅದಕ್ಕೆ ಕಣೋ ಗೆಲುವಿಗಿಂತಲೂ ಸೋಲನ್ನೇ ನಿನ್ನೊಂದಿಗೆ ಹೆಚ್ಚಾಗಿ ಹಂಚಿಕೊಂಡಿದ್ದು. ಯಾವುದನ್ನೇ ಆಗಲಿ ನಿರ್ಲಿಪ್ತವಾಗಿ ಸ್ವೀಕರಿಸುವ ನಿನ್ನ ರೀತಿಯೇ ನನಗಿಷ್ಟವಾಗಿತ್ತು. ನನ್ನ ಸಿಟ್ಟು, ಹಠ, ಕೋಪ, ಬಾಲಿಶತನವನ್ನೆಲ್ಲ ಹಗುರವಾಗಿ ನೋಡಿ ಮೇಲು ನಗೆಯೊಂದಿಗೆ ಹೇಳಿದ್ದ ಬುದ್ದಿಮಾತು ಯಾವ ತಾಯಿ ನುಡಿಗೂ ಕಮ್ಮಿ ಇರಲಿಲ್ಲ.


ಇಷ್ಟೆಲ್ಲಾ ಕ್ಲೋಸ್ ಆಗಿದ್ದ ನೀನು ನನ್ನಿನ್ದ್ಯಾಕೆ ಒಮ್ಮೆಗೆ ದೂರವಾಗಿ ಹೋದದ್ದು ?ಎಂಬುದು ನನಗಿನ್ನೂ ಯಕ್ಷ ಪ್ರಶ್ನೆಯೇ.ಆದ್ರೆ ಗೆಳೆಯಾ, ಸ್ನೇಹ ಸಂಬಂಧಗಳನ್ನು ಮೀರಿದ್ದು, ಅದು ನಿಷ್ಕಲ್ಮಶ.ಸ್ನೇಹ ತಂಗಾಳಿಯೇ ಹೊರತು ಬಿರುಗಾಳಿಯಲ್ಲ. ಫ್ರೆಂಡ್ ಶಿಪ್ ಗೆ ಗುರಿಯಿಲ್ಲ, ಜೊತೆಗೆ ಸ್ವಾರ್ಥವು ಇಲ್ಲ.ಯಾವ ಸಂಬಂಧವು ಕೊನೆಗೊಳ್ಳಬಹುದು. ಆದರೆ ಸ್ವಾರ್ಥವಿಲ್ಲದ ಸ್ನೇಹದಲ್ಲಿ ಉಡಿಸುವುದು ಕೇವಲ ನಂಬಿಕೆ. ಈ ನನ್ನ ನಂಬಿಕೆಗೆ ಕೊಡಲಿಯೇಟು ಹಾಕದೆ, ಉಳಿಸುವಿಯೆಂಬ ನಂಬಿಕೆ ನನ್ನದು. ಸ್ನೇಹ ನೀಡುವುದು ಕಹಿಯನ್ನಲ್ಲ, ಸಿಹಿಯನ್ನು.ಸ್ನೇಹ ಬಯಸುವುದು ದ್ವೆಶವನ್ನಲ್ಲ ,ಪ್ರೀತಿಯನ್ನು. ಸ್ನೇಹ ಚಿರನೂತನ............... ಮತ್ತೆ ಸಿಗುವಿಯೆಂಬ ನಂಬಿಕೆಯಲ್ಲಿ....


Wednesday, February 17, 2010

ಸಂ( ಸಮ್) ಪ್ರೀತಿ

ಗೆಳೆಯಾ,
ಮೊದಮೊದಲು
ನಿನ್ನೆಡೆಗಿದ್ದದ್ದು "ಸಂ-ಪ್ರೀತಿ"
ಆದರೆ,
ನಿನ್ನೊಲವ ಧಾರೆಗೆ
ನನ್ನ ಹ್ರದಯ
"ಸಂಪ್ರೀತ"

ಪ್ರೀತಿ- ಕಾಂತಿ

ನಿನ್ನ ಕಣ್ಣ ಕಾಂತಿಗೆ
ನನ್ನ ಹ್ರದಯ
ಸೂರ್ಯಕಾಂತಿ
ನಿನ್ನ ಮುಗ್ಧ ಪ್ರೀತಿಗೆ
ನನ್ನ ಮನಸ್ಸು
ವಾಲಿತು ನಿನ್ನೆಡೆಗೆ
ಪೂರ್ತಿ -ಪೂರ್ತಿ

Tuesday, February 16, 2010

ಅರ್ಪಣೆ

ಗೆಳೆಯಾ,
ಮನದ ಭಾವಗಳನ್ನು
ಶಬ್ದದಲ್ಲಿ ಹೆಣೆಯುವ
ಕಥೆಗಾತಿ ನಾನಲ್ಲ
ನಿಸ್ಸಾರ ಯೋಚನೆಗಳಿಗೆ
ಕಾವ್ಯರೂಪ ಕೊಡುವ
ಕವಯತ್ರಿಯೂ ನಾನಲ್ಲ
ಆದರೆ,
ಅವೆಲ್ಲಕ್ಕೂ ಮೀರಿದ
ಪ್ರೇಮಿ ನಾನು
ನನ್ನ ಹ್ರದಯವೆ
ನಿನ್ನೊಲವ ಕಾದಂಬರಿ
ನನ್ನ ಬದುಕೇ
ಪ್ರೇಮ ಕಾವ್ಯ
ಎಲ್ಲವು ನಿನಗೆ
"ಅರ್ಪಣೆ"

Monday, February 15, 2010

ಸಂಸ್ಕೃತಿ-ಪೃಕೃತಿ........."ವಿಕೃತಿ"?


ಅದೊಂದು ಕಾಲವಿತ್ತು.....ಒಂದೂರಲ್ಲಿ ಎಲ್ಲರೂ ಎಲ್ಲರಿಗೂ ಆಪ್ತರೂ ಪರಿಚಿತರೂ ಆಗಿದ್ದರು......." ಮುಂದಿನ ಜನಾಂಗಕ್ಕೆ ಕಥೆ ಹೇಳುವ ಪರಿ ಇದಾಗಿರಬಹುದೇ?ಯೋಚಿಸಿದರೆ ಹೌದೆಂದೆನಿಸುತ್ತದೆ. ಯಾಕೆಂದರೆ ಮಾನವೀಯ ಮೌಲ್ಯಗಳು ಸಂಸ್ಕೃತಿಯೊಂದಿಗೆ ಕುಸಿಯುತ್ತಾ ಸಾಗುತ್ತಿವೆ. ದಿನದಿಂದ ದಿನಕ್ಕೆ ಬೆಳೆಯುತ್ತಿರುವ ಆಧುನಿಕತೆಯ ಭೂತ, ನಮ್ಮ ಪರಂಪರೆ ಸಂಸ್ಕೃತಿಯನ್ನೇ ನುಂಗಿ ಹಾಕಿದೆ. ಹಳ್ಳಿಗಳೂ ನಗರೀಕರಣದ ಛಾಯೆಯಡಿಯಲ್ಲೇ ಬೆಳೆಯುತ್ತಿವೆ. ಮುಂದೊಂದು ದಿನ "ಹಳ್ಳಿಗಳ ದೇಶ-ಭಾರತ" ಎಂಬುದನ್ನು ನಮ್ಮ ಮುಂದಿನ ಜನಾಂಗ "ನಗರಗಳ ದೇಶ-ಭಾರತ" ಎಂದು ಓದಬಹುದಾದ ಸಂದರ್ಭ ಒದಗಿ ಬಂದರೂ ಅಚ್ಚರಿ ಪಡಬೇಕಾಗಿಲ್ಲ. ಏಕೆಂದರೆ ಪೃಕೃತಿಯ ನಾಶ ಅಷ್ಟು ತ್ವರಿತಗತಿಯಲ್ಲಾಗುತ್ತಿದೆ.
ಹಳ್ಳಿಗಳೂ ನಗರವಾಗಲು ಟೊಂಕ ಕಟ್ಟಿ ನಿಂತಂತಿವೆ. "ನೇಗಿಲ ಯೋಗಿ" ರೈತ ಇಂದು "ಟ್ರ್ಯಾಕಟರ್"ಯಾಗಿದ್ದಾನೆ. ನೈಸರ್ಗಿಕ ಪೂರ್ಣ ವಿರಾಮ ಬಿದ್ದಿದೆ. ಕಡಿಮೆ ಅವಧಿಯ ಉತ್ತಮ ಫಸಲಿಗಾಗಿ, ರಾಸಾಯನಿಕಗಳ ಹೊಳೆಯನ್ನೇ ಸುರಿಸಲಾಗುತ್ತಿದೆ. ಇಂದಿನ ಜನಾಂಗಕ್ಕೆ ನೇಗಿಲು. ಗದ್ದೆ, ಎತ್ತು ಎಂದರೇನೆಂಬುದನ್ನು ವಿವರಿಸುವ ಸಂದರ್ಭ ಒದಗಿ ಬಂದಿದೆ. ಅವುಗಳೆಲ್ಲವೂ ವಸ್ತು ಸಂಗ್ರಹಾಲಯದಲ್ಲಿರುವುದನ್ನು ನೋಡಿದರೆ ಅಳಬೇಕೋ, ನಗಬೇಕೊ ಎನ್ನುವ ಪರಿಸ್ಥಿತಿ. ಪದ್ಯ- ಪಾಡ್ದನಗಳಂತೂ ಮರೀಚಿಕೆಯಾಗಿ ಬಿಟ್ಟಿವೆ. ಹಂಚಿನ ಮನೆಗಳಂತೂ ಕಾಣ ಸಿಗುವುದೇ ಅಪರೂಪ. ಎತ್ತ ನೋಡಿದರೂ ಕಟ್ಟಡಗಳದ್ದೇ ಕಾರುಬಾರು."ಹಸಿರು" ಎಂಬ ಪದಕ್ಕೆ ನಗರದಲ್ಲಿ ಅರ್ಥವೇ ಇಲ್ಲವಾಗಿದೆ. ಇದಕ್ಕೆ ತಕ್ಕಂತೆ ಒಗ್ಗಿಕೊಳ್ಳಲು ಮುಂದಿನ ಜನಾಂಗವನ್ನೂ ತಯಾರಿ ನಡೆಸುತ್ತಿದ್ದೇವೆ; ಪ್ರೋತ್ಸಾಹಿಸುತ್ತಿದ್ದೇವೆ.
ಇಂದಿನ ಮಕ್ಕಳಿಗಂತೂ ಚಿನ್ನಿದಾಂಡು, ಲಗೋರಿ ಮೊದಲಾದ ದೈಹಿಕವಾಗಿ ಸಧೃಢಗೊಳ್ಳುವಂತೆ ಮಾಡುವ ಆಟಗಳೆಲ್ಲವೂ ಮರೆತು ಹೋಗಿ, ಕಂಪ್ಯೂಟರೆಂಬ ಜಾದೂಗಾರನ ಮೋಡಿಗೆ ಸಿಲುಕಿದ್ದಾರೆ. ಮಾನಸಿಕವಾಗಿ,ದೈಹಿಕವಾಗಿ ದುರ್ಬಲರಾಗಲು ಇಷ್ಟು ಸಾಕಲ್ಲವೇ? ಹಿಂದಿನ ಅಜ್ಜಿಕಥೆಗಳೆಲ್ಲವೂ ಮಾಯವಾಗಿ, ಕಾಟರ್ೂನ್, ಕಾಮಿಕ್ಸ್ ಗಳು ಆ ಸ್ಥಳವನ್ನಾಕ್ರಮಿಸಿವೆ.ಇವು ಮಕ್ಕಳ ಯೋಚನಾ ಶಕ್ತಿ, ಕಲ್ಪನಾ ಶಕ್ತಿಗಳೆರಡನ್ನೂ ಕುಂಠಿತಗೊಳಿಸುತ್ತಿವೆ. ಹೀಗೇ ಮುಂದುವರಿದರೆ ಮುಂದಿನ ಜನಾಂಗ ಯಾಂತ್ರಿಕವಾಗಿ ರೋಬೋಟ್ ಗಳಂತೆ ಜೀವಿಸುವುದರಲ್ಲಿ ಸಂಶವಿಲ್ಲ.
ಸಂಸ್ಕೃತಿಯ ವಿನಾಶವನ್ನಂತೂ ಹೇಳಲಾಗದು.ಎಲ್ಲಿ ನೋಡಿದರೂ ವಿದೇಶೀ ಸಂಸ್ಜೃತಿ.ಅದೇ ಪಬ್-ಬಾರ್ ಗಳು,ಜೀನ್ಸ್ ತರುಣಿಯರು,ಸಿಗರೇಟ್ ಬಿಯರ್ನೊಂದಿಗಿನ ಹುಡುಗರು.ಇವೆಲ್ಲವೂ ಭಾರತೀಯ ಸಂಸ್ಕೃತಿಯ, ಪರಿಸರದ, ಪರಂಪರೆಯ ಅವಸಾನವನ್ನು ತೋರಿಸುತ್ತದೆಯೇ?ನಮ್ಮ ಸಂಸ್ಕೃತಿಯನ್ನು ಅನುಸರಿಸಿದರೆ ಎಲ್ಲಿ ಹಳ್ಳಿಗುಗ್ಗುಗಳೆಂದು ತಿಳಿಯುತ್ತಾರೋ ಎಂಬ ಭಯವೇ?ಅಲ್ಲ ಪಾಶ್ಚಾತ್ಯ ಸಂಸ್ಕೃತಿಯನ್ನು ಅನುಭವಿಸುವ ಚಪಲವೇ?
ಸಂಸ್ಕೃತಿ-ಪೃಕೃತಿಗಳೆರಡರ ಮೇಲೆ ಸ್ವಲ್ಪ ಪ್ರೀತಿ-ಕರುಣೆಗಳಿದ್ದರೂ ಸಾಕು......ಅವುಗಳನ್ನು ಉಳಿಸಲು. ನಮ್ಮತನ, ನಮ್ಮ ಸಂಸ್ಕೃತಿಯೆಂಬ ಸ್ವಾಭಿಮಾನದ ಭಾವವೇ ಸಾಕು ಅವುಗಳನ್ನು ಬೆಳೆಸಲು................

Saturday, February 13, 2010

ಓ ಪ್ರೇಮವೇ...............


ಪೆಬ್ರವರಿ ೧೪ ಪ್ರೇಮಿಗಳಿಗೆ ಹಬ್ಬ;ಸಂಭ್ರಮ.ಯಾವ ಡ್ರೆಸ್ ಹಾಕೋದು, ಯಾವ್ ರೀತಿಯ ಗಿಫ್ಟ್ ಕೊಡೋದು,ಹೇಗೆ ಸರ್ಪ್ರೈಜ್ ಕೊಡೋದು ಎಂಬಿತ್ಯಾದಿ ಯೋಚನೆಗಳು ಪ್ರೆಮಿಗಳಿಗಾದರೆ, ಲವ್ ಲೆಟರ್ ಬರೆಯೋದು ಹೇಗಪ್ಪ,ಯಾವ ರೀತಿ ಪ್ರೊಪೋಸ್ ಮಾಡೋದು ಎಂಬ ಯೋಚನೆಗಳು ಪ್ರೇಮ ನಿವೇದನೆ ಮಾಡುವವರಿಗೆ. ಪ್ರೇಮವೆಂದರೆ ಹಾಗೆ;ರೋಮಾಂಚನ . ಅದಕ್ಕಿರುವ ಶಕ್ತಿ ಆಗಾಧ.

ಎಲ್ಲರಿಗು ಒಂದೊಂದು ದಿನವಿರುವಂತೆ ಪ್ರೇಮಿಗಳಿಗೂ ಒಂದು ದಿನವನ್ನು ಆಚರಿಸುವಂತೆ ಮಾಡಿದ್ದು ವಾಲೆಂಟೈನ್.ರೋಮ್ ದೇಶದಲ್ಲಿ ಕ್ಲಾಡಿಯಸ್ ಎಂಬ ರಾಜನು ಯುದ್ದಕ್ಕೆ ಸೇರುವಂತೆ ಜನರನ್ನು ಪೀಡಿಸುತ್ತಿದ್ದ.ಜನರು ರಾಜನ ಉಪಟಳಕ್ಕೆ ಬೇಸತ್ತು ತಲೆ ಮರೆಸಿಕೊಳ್ಳುತ್ತಿದ್ದರು.ಇದರಿಂದ ಕೋಪಗೊಂಡ ರಾಜ ಮದುವೆಯಾಗದಂತೆ ಜನರಿಗೆ ತಡೆಯೊಡ್ಡಿದ.ಆಗ ಅದೇ ದೇಶದ ವಾಲೆಂಟೈನ್ ಎಂಬಾತ ಪ್ರೇಮಿಗಳನ್ನು ಒಗ್ಗೂಡಿಸಲು ಮಾಡುವೆ ಮಾಡಿಸುತ್ತಿದ್ದ.ಪರಿಣಾಮ ಅವನಿಗೆ ಅಜೀವ ಪರ್ಯಂತ ಶಿಕ್ಷೆ ವಿಧಿಸಲಾಯಿತು. ಆಗ ಅವನ ಕಾರ್ಯವನ್ನು ಮುಂದುವರಿಸಿಕೊಂಡು ಹೋದವಳು ಅಲ್ಲಿಯ ಕಾವಲುಗಾರನ ಮಗಳು;ದಿನಾ ಅವನನ್ನು ಭೇಟಿಯಾಗುತ್ತಿದ್ದಳು.ವಾಲೆಂಟೈನ್ ಕೊನೆಯುಸಿರೆಳೆಯುವ ಮೊದಲು ಆಕೆಗೊಂದು ಪ್ರೇಮ ಪತ್ರ ಬರೆದಿದ್ದ. ಅದರಲ್ಲಿ "ಲವ್ ಫ್ರಂ ವಾಲೆಂಟೈನ್ " ಎಂದು ಬರೆದಿದ್ದ. ವಾಲೆಂಟೈನ್ ಗೆ ಪ್ರೀತಿಯ ಮೇಲಿರುವ ಪ್ರೇಮಕ್ಕಾಗಿ ಈ ದಿನವನ್ನು "ವಾಲೆಂಟೈನ್ಸ್ ಡೆ " ಎಂದು ಆಚರಿಸಲಾಗುತ್ತದೆ.

ಪ್ರೇಮಿಗಳಿಗಾಗಿಯೇ ಒಂದು ದಿನ ಬೇಕೇ? ಪ್ರೀತಿಸುವವರಿಗೆ ಎಲ್ಲ ದಿನಗಳು ಒಂದೇ .ಮತ್ಯಾಕೆ ಪ್ರೇಮಿಗಳ ದಿನ ?ಎಂಬುದು ಇಂದು ವ್ಯಾಪಕವಾಗಿ ಚರ್ಚೆಯಲ್ಲಿರುವ ಪ್ರಶ್ನೆ.ಆದರೆ ಎಲ್ಲರಿಗು ಒಂದು ದಿನವಿರುವಂತೆ ಪ್ರೇಮಿಗಳಿಗೂ ಒಂದು ದಿನವಿದ್ದರೆ ತಪ್ಪೇನು.ಲವ್ ಜೀವನದಲ್ಲಿ ಯಾವತ್ತಿಗೂ ಎಂದೆಂದಿಗೂ ಇರುತ್ತದೆ ನಿಜ. ಪ್ರೀತಿಗೂ ಒಂದು ದಿನದ ಸಂಭ್ರಮವಿದ್ದರೆ ಪ್ರೇಮಿಗಳಿಗೆ ಅದರಲ್ಲಿರುವ ಮಜಾನೆ ಬೇರೆ.

ನಿಜವಾದ ಪ್ರೀತಿಯೇ ವಾಲೆಂಟೈನ್ ಗೆ ಪ್ರೇಮಿಗಳು, ಪ್ರೇಮಿಗಳ ದಿನದಂದು ಕೊಡಬಹುದಾದ ಕೊಡುಗೆ.ಇಂದು ಪ್ರೀತಿಯ ಅರ್ಥವೇ ಅನರ್ಥವಾಗುತ್ತಿದೆ. ಸ್ವಾರ್ಥಕ್ಕಾಗಿ,ಟೈಮ್ ಪಾಸ್ ಗಾಗಿ ಹಲವರು ಪ್ರೀತಿಯ ನಾಟಕವಾಡುತ್ತಾರೆ. ಒಬ್ಬರ ಭಾವನೆಯನ್ನು ಇನ್ನೊಬ್ಬರು ಅರ್ಥ ಮಾಡಿಕೊಳ್ಳುತ್ತಿಲ್ಲ.ಪ್ರೀತಿಯ ದುರ್ಬಳಕೆಯಾಗುತ್ತಿದೆ.ಲವ್ ಮಾಡೋದು ಒಂದು ಶೋಕಿ ಎಂಬಂತಾಗಿದೆ. ಪ್ರೇಮದ ನಿಜವಾದ ಅರ್ಥವನ್ನು ಅರಿತು, ಗಾಢವಾಗಿ ಪ್ರೀತಿಸಿದರೆ ಮಾತ್ರ "ಪ್ರೇಮಿಗಳ ದಿನಕ್ಕೊಂದು" ಅರ್ಥ ಅಲ್ಲವೇ?

Thursday, February 4, 2010

ನನ್ನೆದೆಯ ತುಂಬಾ..............

ಆಗಸದಲಿ ನಕ್ಷತ್ರದ ಮಿನುಗು
ನನ್ನೆದೆಯ ತುಂಬಾ ನಿನ್ನ ಗುನುಗು
ಹೂದೋಟದ ತುಂಬಾ ಸ್ವರ್ಣ ಸುಗಂಧ
ನನ್ನೆದೆಯ ತುಂಬಾ ನಿನ್ನ ಅನುಬಂಧ
ಮುಂಜಾನೆಯ ಮೇಲೆ ನೀರ ತುಂತುರು
ನನ್ನೆದೆಯೊಳಗೆ ನಿನ್ನ ಪ್ರೀತಿ ಶುರು
ಮುಸ್ಸಂಜೆಯ ಮೇಲೆ ಗೋಧೂಳಿಯ ಚೆಲ್ಲಾಟ
ನನ್ನೆದೆಯೊಳಗೆ ನಿನ್ನೊಲವ ತಕಧಿಮಿತ
ನಿಶೆಯ ಮೇಲೆ ಬೆಳದಿಂಗಳ ಅಭಿಷೇಕ
ನನ್ನೆದೆಯೊಳಗೆ ವಿರಹದಾ ಶೋಕ
ಉಷೆಯೊಂದಿಗೆ ಹಕ್ಕಿಗಳ ಇಂಚರ
ನನ್ನೆದೆಯೊಳಗೆ ನಿನ್ನ ಪ್ರೀತಿ ನಿರಂತರ
ಹಸಿರೆಲೆಯ ಮೇಲೆ ಮಲ್ಲಿಗೆ ಓಕುಳಿ
ನನ್ನೆಸೆಯೇಯೊಳಗೆ ನಿನ್ನ ನೆನಪಿನ ಚಿಲಿಪಿಲಿ
ಕಾನನದೊಳಗೆ ಚೆಲುವಿನ ನೀರಧಾರೆ
ನನ್ನೆದೆಯೊಳಗೆ ನಿನ್ನ ಪ್ರೀತಿ ಅಮ್ರತ ಧಾರೆ
ಪ್ರಕ್ರತಿಯ ಮೇಲೆ ಹಸಿರಿನ ಎರಚಾಟ
ನನ್ನೆದೆಯೊಳಗೆ ನಿನ್ನ ನೋಡುವ ಪರದಾಟ
ನಿದಿರೆಯೊಳಗೆ ಕನಸಿನ ಸಾಮ್ರಾಜ್ಯ
ನನ್ನೆದೆಯೊಳಗಿನ ಎಲ್ಲಾ ಪ್ರೀತಿ ನಿನಗೆ ಅಜ್ಯಾ