Monday, February 15, 2010

ಸಂಸ್ಕೃತಿ-ಪೃಕೃತಿ........."ವಿಕೃತಿ"?


ಅದೊಂದು ಕಾಲವಿತ್ತು.....ಒಂದೂರಲ್ಲಿ ಎಲ್ಲರೂ ಎಲ್ಲರಿಗೂ ಆಪ್ತರೂ ಪರಿಚಿತರೂ ಆಗಿದ್ದರು......." ಮುಂದಿನ ಜನಾಂಗಕ್ಕೆ ಕಥೆ ಹೇಳುವ ಪರಿ ಇದಾಗಿರಬಹುದೇ?ಯೋಚಿಸಿದರೆ ಹೌದೆಂದೆನಿಸುತ್ತದೆ. ಯಾಕೆಂದರೆ ಮಾನವೀಯ ಮೌಲ್ಯಗಳು ಸಂಸ್ಕೃತಿಯೊಂದಿಗೆ ಕುಸಿಯುತ್ತಾ ಸಾಗುತ್ತಿವೆ. ದಿನದಿಂದ ದಿನಕ್ಕೆ ಬೆಳೆಯುತ್ತಿರುವ ಆಧುನಿಕತೆಯ ಭೂತ, ನಮ್ಮ ಪರಂಪರೆ ಸಂಸ್ಕೃತಿಯನ್ನೇ ನುಂಗಿ ಹಾಕಿದೆ. ಹಳ್ಳಿಗಳೂ ನಗರೀಕರಣದ ಛಾಯೆಯಡಿಯಲ್ಲೇ ಬೆಳೆಯುತ್ತಿವೆ. ಮುಂದೊಂದು ದಿನ "ಹಳ್ಳಿಗಳ ದೇಶ-ಭಾರತ" ಎಂಬುದನ್ನು ನಮ್ಮ ಮುಂದಿನ ಜನಾಂಗ "ನಗರಗಳ ದೇಶ-ಭಾರತ" ಎಂದು ಓದಬಹುದಾದ ಸಂದರ್ಭ ಒದಗಿ ಬಂದರೂ ಅಚ್ಚರಿ ಪಡಬೇಕಾಗಿಲ್ಲ. ಏಕೆಂದರೆ ಪೃಕೃತಿಯ ನಾಶ ಅಷ್ಟು ತ್ವರಿತಗತಿಯಲ್ಲಾಗುತ್ತಿದೆ.
ಹಳ್ಳಿಗಳೂ ನಗರವಾಗಲು ಟೊಂಕ ಕಟ್ಟಿ ನಿಂತಂತಿವೆ. "ನೇಗಿಲ ಯೋಗಿ" ರೈತ ಇಂದು "ಟ್ರ್ಯಾಕಟರ್"ಯಾಗಿದ್ದಾನೆ. ನೈಸರ್ಗಿಕ ಪೂರ್ಣ ವಿರಾಮ ಬಿದ್ದಿದೆ. ಕಡಿಮೆ ಅವಧಿಯ ಉತ್ತಮ ಫಸಲಿಗಾಗಿ, ರಾಸಾಯನಿಕಗಳ ಹೊಳೆಯನ್ನೇ ಸುರಿಸಲಾಗುತ್ತಿದೆ. ಇಂದಿನ ಜನಾಂಗಕ್ಕೆ ನೇಗಿಲು. ಗದ್ದೆ, ಎತ್ತು ಎಂದರೇನೆಂಬುದನ್ನು ವಿವರಿಸುವ ಸಂದರ್ಭ ಒದಗಿ ಬಂದಿದೆ. ಅವುಗಳೆಲ್ಲವೂ ವಸ್ತು ಸಂಗ್ರಹಾಲಯದಲ್ಲಿರುವುದನ್ನು ನೋಡಿದರೆ ಅಳಬೇಕೋ, ನಗಬೇಕೊ ಎನ್ನುವ ಪರಿಸ್ಥಿತಿ. ಪದ್ಯ- ಪಾಡ್ದನಗಳಂತೂ ಮರೀಚಿಕೆಯಾಗಿ ಬಿಟ್ಟಿವೆ. ಹಂಚಿನ ಮನೆಗಳಂತೂ ಕಾಣ ಸಿಗುವುದೇ ಅಪರೂಪ. ಎತ್ತ ನೋಡಿದರೂ ಕಟ್ಟಡಗಳದ್ದೇ ಕಾರುಬಾರು."ಹಸಿರು" ಎಂಬ ಪದಕ್ಕೆ ನಗರದಲ್ಲಿ ಅರ್ಥವೇ ಇಲ್ಲವಾಗಿದೆ. ಇದಕ್ಕೆ ತಕ್ಕಂತೆ ಒಗ್ಗಿಕೊಳ್ಳಲು ಮುಂದಿನ ಜನಾಂಗವನ್ನೂ ತಯಾರಿ ನಡೆಸುತ್ತಿದ್ದೇವೆ; ಪ್ರೋತ್ಸಾಹಿಸುತ್ತಿದ್ದೇವೆ.
ಇಂದಿನ ಮಕ್ಕಳಿಗಂತೂ ಚಿನ್ನಿದಾಂಡು, ಲಗೋರಿ ಮೊದಲಾದ ದೈಹಿಕವಾಗಿ ಸಧೃಢಗೊಳ್ಳುವಂತೆ ಮಾಡುವ ಆಟಗಳೆಲ್ಲವೂ ಮರೆತು ಹೋಗಿ, ಕಂಪ್ಯೂಟರೆಂಬ ಜಾದೂಗಾರನ ಮೋಡಿಗೆ ಸಿಲುಕಿದ್ದಾರೆ. ಮಾನಸಿಕವಾಗಿ,ದೈಹಿಕವಾಗಿ ದುರ್ಬಲರಾಗಲು ಇಷ್ಟು ಸಾಕಲ್ಲವೇ? ಹಿಂದಿನ ಅಜ್ಜಿಕಥೆಗಳೆಲ್ಲವೂ ಮಾಯವಾಗಿ, ಕಾಟರ್ೂನ್, ಕಾಮಿಕ್ಸ್ ಗಳು ಆ ಸ್ಥಳವನ್ನಾಕ್ರಮಿಸಿವೆ.ಇವು ಮಕ್ಕಳ ಯೋಚನಾ ಶಕ್ತಿ, ಕಲ್ಪನಾ ಶಕ್ತಿಗಳೆರಡನ್ನೂ ಕುಂಠಿತಗೊಳಿಸುತ್ತಿವೆ. ಹೀಗೇ ಮುಂದುವರಿದರೆ ಮುಂದಿನ ಜನಾಂಗ ಯಾಂತ್ರಿಕವಾಗಿ ರೋಬೋಟ್ ಗಳಂತೆ ಜೀವಿಸುವುದರಲ್ಲಿ ಸಂಶವಿಲ್ಲ.
ಸಂಸ್ಕೃತಿಯ ವಿನಾಶವನ್ನಂತೂ ಹೇಳಲಾಗದು.ಎಲ್ಲಿ ನೋಡಿದರೂ ವಿದೇಶೀ ಸಂಸ್ಜೃತಿ.ಅದೇ ಪಬ್-ಬಾರ್ ಗಳು,ಜೀನ್ಸ್ ತರುಣಿಯರು,ಸಿಗರೇಟ್ ಬಿಯರ್ನೊಂದಿಗಿನ ಹುಡುಗರು.ಇವೆಲ್ಲವೂ ಭಾರತೀಯ ಸಂಸ್ಕೃತಿಯ, ಪರಿಸರದ, ಪರಂಪರೆಯ ಅವಸಾನವನ್ನು ತೋರಿಸುತ್ತದೆಯೇ?ನಮ್ಮ ಸಂಸ್ಕೃತಿಯನ್ನು ಅನುಸರಿಸಿದರೆ ಎಲ್ಲಿ ಹಳ್ಳಿಗುಗ್ಗುಗಳೆಂದು ತಿಳಿಯುತ್ತಾರೋ ಎಂಬ ಭಯವೇ?ಅಲ್ಲ ಪಾಶ್ಚಾತ್ಯ ಸಂಸ್ಕೃತಿಯನ್ನು ಅನುಭವಿಸುವ ಚಪಲವೇ?
ಸಂಸ್ಕೃತಿ-ಪೃಕೃತಿಗಳೆರಡರ ಮೇಲೆ ಸ್ವಲ್ಪ ಪ್ರೀತಿ-ಕರುಣೆಗಳಿದ್ದರೂ ಸಾಕು......ಅವುಗಳನ್ನು ಉಳಿಸಲು. ನಮ್ಮತನ, ನಮ್ಮ ಸಂಸ್ಕೃತಿಯೆಂಬ ಸ್ವಾಭಿಮಾನದ ಭಾವವೇ ಸಾಕು ಅವುಗಳನ್ನು ಬೆಳೆಸಲು................

No comments:

Post a Comment