Wednesday, February 3, 2010

ನನ್ನ ಮೊದಲ ಪ್ರೇಮ ಕಥೆ ..................ಕೊನೆಯದೂ


ಗೆಳೆಯಾ, ಪ್ರೀತಿ ಎಂದರೆ ಇದೇ ಅಲ್ವಾ? ಅರೆ ನಿದ್ದೆಯಲಿ ಬಿದ್ದ ಸವಿ ಕನಸಿನಂತೆ ,ಸವಿ ಕನಸು ಮುಗಿಯದಿರಲಿ ಎಂಬ ಆಶಯದಂತೆ .....ಮೊಗೆದಷ್ಟೂ ಬೇಕು ಬೇಕು ಅನಿಸುತ್ತಲೇ ಹೋಗುತ್ತದೆ.ಅದರೊಳಗೆ ಆಳವಾಗಿ ಮುಳುಗಿ ಹೋಗಬೇಕೆನಿಸುತ್ತದೆ. ಆದರೆ ಪ್ರೀತಿ ತಳವಿಲ್ಲದ ಬಾವಿಯಂತೆ.ಎಷ್ಟು ಒಳ ಹೊಕ್ಕರೂ ತಳ ತಲುಪದು.ಅದಕ್ಕೆ ತಾನೇ ಪ್ರೀತಿಯನ್ನು ಮಾಯೆ ಅನ್ನೋದು.


ಪ್ರೀತಿಯೆಂದರೆ ಏನೇನೋ ಕಲ್ಪಿಸಿಕೊಂಡಿದ್ದ ನನಗೆ ಪ್ರೀತಿಯ ಅಪೂರ್ಣ ಅರ್ಥವನ್ನು ತಿಳಿಸಿದ್ದು ನೀನು.ಸಂಪೂರ್ಣತೆ ಅರಿವಾಗದಿರಲೆಂಬ ಆಶಯ ನನ್ನದು.ಪ್ರೀತಿಯ ಸಂಪೂರ್ಣತೆಯ ಭ್ರಮೆಯಲ್ಲಿರುವವನು ಮತ್ತೆ ಪ್ರೀತಿಸಲಾರ.ಆದ್ದರಿಂದ ಅಪೂರ್ಣತೆಯೇ ನನಗಿರಲಿ.


ಪ್ರೀತಿ ಎಲ್ಲ ಶಕ್ತಿಗಳಿಗೂ ಮೀರಿದ್ದು.ಇಲ್ಲದ್ದನ್ನು ಉಂಟಾಗಿಸುವಂಥದ್ದು,ಅದು ಬದುಕಿಗೊಂದು ಗುರಿ.ನನ್ನಲ್ಲಿ ಈ ಪ್ರೀತಿ ಯಾವಾಗ ಹೇಗೆ ಅದ್ಯಾವ ಮಾಯೆಯಲ್ಲಿ ಉಂಟಾಯಿತೋ....?ನನಗಿನ್ನು ಅದು ಯಕ್ಷ ಪ್ರಶ್ನೆಯೇ. ಆದರೆ ಗುರಿಯಿಲ್ಲದ ಬಾಳಿಗೆ ದಾರಿಯಾದದ್ದು ನಿಜ.ಪ್ರೀತಿಸಲೇ ಬಾರದೆಂದು ನಿಶ್ಚಯಿಸಿದ್ದವಳಿಗೆ ಅದ್ಹೇಗೆ ಪ್ರೀತಿಯ ಮಂಕು ಬಡಿಯಿತೋ ನಾ ಕಾಣೆ.


ಪ್ರೀತಿಯೆಂದರೆ ಅಪ್ಪ -ಅಮ್ಮ ,ಅಣ್ಣ-ತಮ್ಮ ಎಂದಷ್ಟೇ ಗೊತ್ತಿದ್ದ ನಾನು ಪ್ರೀತಿಯಲ್ಲಿ ಸ್ವಾರ್ಥಿಯಾಗೆ ಬೆಳೆದೆ.ಓದಲೆಂದು ನಮ್ಮನೆಗೆ ಬಂದಿದ್ದ ನಿನಗೆ ,ಪ್ರೀತಿಯಲ್ಲಿ ನನ್ನಷ್ಟೇ ಪಾಲು ದೊರಕಿದ್ದು ಕಂಡು ಅಸೂಯೆಗೊಂಡೆ.ಅಂದಿನಿಂದಲೇ ನಿನ್ನ ದ್ವೇಷಿಸಲಾರಂಭಿಸಿದೆ.ಆದರೆ ನೀನು ಮಾತ್ರ ಪ್ರೀತಿಯ ಮೂರ್ತಿಯಂತಿದ್ದೆ.ದ್ವೇಷದ ಇನ್ನೊಂದು ಮುಖವೇ ಪ್ರೀತಿಯೆಂದು ತಿಳಿದದ್ದು ನಿನ್ನಿಂದ.


ಪ್ರೀತಿಯೆಂದರೆ ತುಂಟಾಟ,ಹ್ರದಯವನ್ನು ಗೆಲ್ಲುವ ಹೋರಾಟ,ನನಗೆಲ್ಲವೂ ನೀನೆ ಎನ್ನುವ ತ್ಯಾಗ,ನೋಟಗಳ ಮಿಳಿತ ಎಂಬಿತ್ಯಾದಿ ಹುಚ್ಚು ಕಲ್ಪನೆಗಳೇ ನನ್ನೋಳಗಿದ್ದವು . ಆದರೆ ಪ್ರೇಮವೆಂದರೆ ಇಷ್ಟೇ ಅಲ್ಲ,ಹೊಸ ಪ್ರಪಂಚವೇ ಇದೆ ಎಂದು ತೋರಿಸಿಕೊಟ್ಟವನು ನೀನು.ಅದ್ಯಾಕೋ ಇಂದೂ ನೆನಪಿದೆ, ಜ್ವರದ ಸಂಕಟದಲ್ಲಿ ಪರೀಕ್ಷೆಯ ಭಯದಲ್ಲಿ ಬೇಯುತ್ತಿದ್ದ ನನಗೆ ಸಮಾಧಾನದ ಮಳೆಯೇ ಹರಿದು ಬಂತು. ಆದರೂ ನಿರ್ಧಾರಕ್ಕೆ ಬರಲಾಗದಿದ್ದವಳಿಗೆ ತುಂಬು ಸಾಂತ್ವಾನ್ನ ನೀಡಿದ್ದು ಆ ಚಂದದ ಬೂದು ಗೋಲಿ ಕಂಗಳು.ನಡುಗುತ್ತಿದ್ದ ಕೈಗೆ ಆಧಾರವಾದ್ದು ನಿನ್ನ ಬೆಚ್ಚನೆಯ ಸ್ಪರ್ಶ.ಕೊನೆಗೂ ಜ್ವರದ ತಾಪದಲ್ಲಿ ಕೊನೆಯ ಎಕ್ಸಾಮ್ ಮುಗಿಸಿ ಪಾಸಾದದ್ದು ಆಮೇಲಿನ ಮಾತು. ಆದರೆ ಪ್ರೀತಿಯ ಪರೀಕ್ಷೆ ಆರಂಭವಾದದ್ದು ಇಲ್ಲಿಂದಲೇ...........


ನೀನೆನೆಂಬುದು ನನಗಿನ್ನೂ ಅರ್ಥವೇ ಆಗಿಲ್ಲ ಕಣೋ.ನಿನ್ನ ಪ್ರೀತಿ ಗಂಭೀರವಾಗಿ ಹರಿಯುವ ನದಿಯಂತೆ ಪ್ರಶಾಂತ.ರಮಣೀಯ ಪ್ರಕ್ರತಿಯೊಳಗಿನ ಅಚ್ಚರಿಯಂತೆ ರಹಸ್ಯ.ಆಳವಾಗಿ ಹೋದಷ್ಟು ಎಷ್ಟೋ ಅದ್ಭುತ.ಇಷ್ಟೊಂದು ಪ್ರೀತಿಸಲು ಸಾಧ್ಯಾನ ಎಂಬ ಅಚ್ಚರಿ.ನಿನ್ನ ಪ್ರೀತಿ ಗುಪ್ತ ಗಾಮಿನಿಯಂತೆ ನಿಶ್ಯಬ್ದ ;ನಿರಂತರ......... ಅದೆಷ್ಟೋ ಬಾರಿ ಅಂದುಕೊಂಡಿದ್ದೇನೆ ನನ್ನೋಳಗಿಂದಲೇ ನಾ ದೂರವಾಗಿ ನಿನ್ನೊಳಗೆ ಸೇರಲು ಸಾಧ್ಯವಾಗಿದ್ದರೆ......?ಎಂದು, ಎಷ್ಟು ಮಧುರ ಅಲ್ವೇನೋ?


ಅದ್ಯಾಕೋ ಗೆಳೆಯಾ, ನಿನ್ನ ಪ್ರೀತಿಯಲ್ಲಿ ತುಂಟತನಕ್ಕಿನ್ತಲೂ ಜವಾಬ್ದಾರಿಯೇ ಹೆಚ್ಚು?ನಾನು ಸಣ್ಣ ಹುಡುಗಿಯಂತೆ ಪೋಕಿರಿಯಾದರೆ,ನೀನು ಜವಾಬ್ದಾರಿ ಹೊತ್ತಿರುವ ಅಪ್ಪನಂತೆ ಗಂಭೀರ.ನೀನು ತುಂಬಾ ಬ್ಯುಸಿಯಾಗಿರುವಾಗ ಒಂದು ಕಾಲ್ ರಿಸೀವ್ ಮಾಡದಿದ್ದರೆ ನಿಂಗೆ ನನ್ಮೇಲೆ ಪ್ರೀತಿನೆ ಇಲ್ಲ ಎಂದು ನಾ ಮುನಿಯುತ್ತೇನೆ;ಕೋಪದ ಧಾರೆಯನ್ನೇ ಹರಿಸುತ್ತೇನೆ.ಆದರೆ ನೀನು "ನನಗರ್ಥ ಆಗುತ್ತೋ ತುಂಬಾ ಬ್ಯುಸಿಯಲ್ವಾ?ಚೆನ್ನಾಗಿ ಓದು"ಎಂದು ನಂಗೆ ಸಮಾಧಾನ ಮಾಡ್ತಿಯಲ್ವಾ? ಇಷ್ಟು ತಾಳ್ಮೆನ ಯಾರಿಂದಲೋ ಕಲಿತದ್ದು?


ಚೆಲ್ಲಾಟವಾಡದೆ ಗಂಭೀರವಾಗಿರೋ ನಿನ್ನ ವ್ಯಕ್ತಿತ್ವದೆದುರು, ಸ್ವಾರ್ಥವಿಲ್ಲದ ನಿಸ್ವಾರ್ಥ ಹ್ರದಯದೆದುರು ,ಒಲವನ್ನೆಲ್ಲ ತುಂಬಿಕೊಂಡಿರುವ ನಿನ್ನ ಕಂಗಳೆದುರು ನಾನದೆಷ್ಟು ಸಣ್ಣವಳು ಗೊತ್ತ?ಅದೆಷ್ಟೋ ಸಾರಿ ನನ್ನ ಹುಡುಗ ಎಷ್ಟು ಒಳ್ಳೆಯವನಲ್ವಾಂತ ಹೆಮ್ಮೆ ಪಟ್ಟಿದ್ದೀನಿ.ಛೆ! ನಂಗೆ ಹಾಗಿರೋಕೆ ಬರಲ್ವಲ್ಲಾಂತ ಅಸೂಯೇನು ಪಟ್ಟಿದ್ದೀನಿ.ಗೊತ್ತೇನೋ?


ಬುದ್ದಿ ತಿಳಿದಾಗಿನಿಂದ ಹ್ರದಯ ಅರಳಿದ್ದು ನಿನ್ನೋರ್ವನನ್ನೇ ಕಂಡು.ಪ್ರೇಮ ಕಥೆ ಶುರುವಾಗಿದ್ದು ನಿನ್ನಿಂದಲೇ....ಇದುವೇ ನನ್ನ ಮೊದಲ ಪ್ರೇಮಕಥೆಯ ಆರಂಭವೂ ಅಂತ್ಯವೂ ಆಗಿರಲೆಂದು ಆಶಿಸುತ್ತೇನೆ.ಇದುವೇ ನಾ ನಿನ್ನ ಮ್ರದು -ಮಧುರ ಪ್ರೀತಿಗೆ ನೀಡುವ ಉಡುಗೊರೆ ಕಣೋ........


ಇದೇ ನನ್ನ ಮೊದಲ ಪ್ರೇಮ ಕಥೆ .................ಕೊನೆಯದೂ.

6 comments: