Monday, February 1, 2010

ಗೆಳೆತನದಲ್ಲಿ ಹೀಗ್ಯಾಕೆ?

ಸ್ನೇಹಕ್ಕೆ ಮೀರಿದ ಭಾವ ಮತ್ತೊಂದಿಲ್ಲ; ಅದು ನಿಷ್ಕಲ್ಮಶ .ಗೆಳೆತನದಲ್ಲಿ ಸಿಗೋ ನಿರಾಳತೆ ಮತ್ಯಾವ ಸಂಬಂಧದಲ್ಲೂ ಸಿಗೋಲ್ಲ. ಅದೊಂದು ಸಹಜ ಸುಂದರ ಅನುಬಂಧ. ಭಾವನಾತ್ಮಕವಾಗಿ ಯೋಚಿಸಿದರೆ ಇದೆಲ್ಲಾ ನಿಜ.ಆದರೆ ವಾಸ್ತವದಲ್ಲಿ......?. ಯಾವುದೇ ಕಾರ್ಯ ಕಾರಣವಿಲ್ಲದೆ ಕಾಲವೆಂಬ ಮಧ್ಯಂತರ ಸ್ನೇಹ ಎಂಬ ಬಂಧದಲ್ಲಿ ಬಿರುಕು ಮುಡಿಸುತ್ತಾ ಹೋಗುತ್ತದೆ.ಕ್ರಮೇಣ ಸ್ನೇಹ ಎಂಬ ಪದಕ್ಕೆ ಅರ್ಥವೇ ಇಲ್ಲವಾಗುತ್ತದೆ.
ನಾನೂ ಸ್ನೇಹವನ್ನು ಅತಿಯಾಗಿ ನಂಬಿದವಳು. ಯಾವ ಸಂಭಂದವೂ ಹಾಳಾದೀತು ಸ್ನೇಹ ಮಾತ್ರ ಸಾಯೋದಿಲ್ಲ ,ಅದು ಎಂದಿಗೂ ತುಂಡಾಗದ ಸಂಕೋಲೆ ಎಂಬಿತ್ಯಾದಿ ಕಲ್ಪನೆಗಳನ್ನು ತುಂಬಿ ಕೊಂಡವಳು.ಆದರೆ ವಾಸ್ತವತೆ ನನ್ನೆಲ್ಲಾ ಹುಚ್ಹು ಕಲ್ಪನೆಗಳಿಗೆ ಉತ್ತರವಾಯಿತು.
ನನಗು ಒಬ್ಬ ಬಾಲ್ಯ ಗೆಳೆಯನಿದ್ದ. ಎಲ್ಲ ವಿಷಯಗಳನ್ನು ಯಾವುದೇ ಮುಚ್ಚು ಮರೆಯಿಲ್ಲದೆ ಹಂಚಿಕೊಂಡವರು.ಸುಖ ದುಖಗಳಲ್ಲಿ ಸಮಾನ ಪಾಲುದಾರರು. ಆಗ ಅವನೆಂದರೆ ಸ್ನೇಹ, ಸ್ನೇಹ ಎಂದರೆ ಅವನು ಎಂಬಸ್ತು ಘಟ್ಟಿಯಾಗಿತ್ತು ನಮ್ಮ ಬಂಧ.ಪದವಿ ಶಿಕ್ಷಣದ ಸಂದರ್ಭದಲ್ಲಿ ಈರ್ವರ ದಾರಿ ಕವಲೊಡೆಯಿತು.ಆದರೂ ಅದು ನಮ್ಮ ಸ್ನೇಹಕ್ಕೆ ತಡೆಗೋಡೆಯಾಗಲಾರದು ಎಂದು ನಾನು ನಂಬಿದ್ದೆ.ಆದರೆ ಸ್ನೇಹದಲ್ಲಿ ಹೇಗೆಲ್ಲಾ ಬಿರುಕು ಮೂಡಬಹುದು ,ಸ್ನೇಹ ಸಂಕೋಲೆ ಯಾಕೆ ತುಂಡಾಗಬಹುದೆಂದು ತಿಳಿದದ್ದು ಆಗಲೇ.
ಅದೊಂದು ದಿನ ಕೆಲವು ತಿಂಗಳ ಬಳಿಕ ತಡೆಯಲಾರದೆ ನಾನೇ ಅವನಿಗೆ ಫೋನಾಯಿಸಿದ್ದೆ.ಸ್ವಲ್ಪ ಮಾತನಾಡಿದ ಅವನು 'ಸ್ವಲ್ಪ ಬ್ಯುಸಿ ಕಣೆ ಆಮೇಲೆ ನಾನೇ ಮಾಡ್ತೀನಿ' ಅಂದ. ಅವನ ಕರೆಗೆ ಕಾದಿದ್ದೆ ಕಾದಿದ್ದು.ಕಾಲ್ ಬರಲೇ ಇಲ್ಲ. ಆಗ ಶುರುವಾಯಿತು ನೋಡಿ 'ಇಗೋ ಪ್ರಾಬ್ಲಂ .,ನಾನ್ಯಾಕೆ ಮಾಡಲಿ ಎಂಬ ಸಣ್ಣ ಭಾವವೇ ಸ್ನೇಹಕ್ಕೆ ಕಂಟಕವಾಯಿತು.ವರ್ಷದ ಬಳಿಕ ನಾನೇ ಕಾಲ್ ಮಾಡೋಣಾ ಅಂದ್ರು ನಾನೇ ಬ್ಯುಸಿಯಾಗಿ ಬಿಟ್ಟೆ.ನಾಳೆ ನಾಳೆ ಎಂದೆನ್ನುತ್ತ ಕಂದಕ ಬೆಳೆಯುತ್ತಾ ಹೋಯಿತು.ಅವ್ನು ಕಾಲ್ ಮಾಡದೇ ಇರೋದಕ್ಕೆ ಹಲವು ಕಾರಣಗಳನ್ನೂ ಯೋಚಿಸಿದೆ.'ನನಗಿಂತಲೂ ಉತ್ತಮ ಗೆಳತಿ ದೊರಕಿರಬೇಕು ,ಅದಕ್ಕೆ ನನ್ನ ನೆನಪಿರಲಾರದು' ಎಂದುಕೊಂಡ ಮನಸ್ಸಿಗೆ ಪಿಚ್ಚೆನಿಸಿತು.ಸರಿ, ಅವನು ಅವನಷ್ಟಕ್ಕೆ ಹಾಯಾಗಿರಲಿ ಅಂದುಕೊಂದು ನಾನು ಹೊಸ ಗೆಳೆಯರ ತಲಾಷೆಯಲ್ಲಿ ತೊಡಗಿದೆ.ಕ್ರಮೇಣ ಸಂಪೂರ್ಣ ಅಲ್ಲದಿದ್ದರೂ, ಚಂದದ ಸುಂದರ ಗೆಳೆತನವನ್ನು ಮರೆಯುತ್ತಾ ಹೋದೆ.ಅಲ್ಲಿಗೆ ಒಂದು ಸ್ನೇಹ ಸಂಬಧದ ಕೊಲೆಯಾಗಿತ್ತು.
ಹೀಗೆ ಸ್ನೇಹದಲ್ಲಿ ಮೂಡುವ ಸಣ್ಣ ಬಿರುಕು ಭದ್ರ ಬುನಾದಿಯನ್ನೇ ಅಲ್ಲಾಡಿಸಿ ಬಿಡುತ್ತದೆ.ಸ್ನೇಹವನ್ನು ಮುಂದುವರಿಸಿಕೊಂಡು ಹೋಗುವುದು ಒಂದು ಕಲೆ,ಅದನ್ನು ಬೆಳೆಸಿಕೊಳ್ಳಬೇಕು.ಆಗ ಮಾತ್ರ ಸ್ನೇಹ ಚಿರಾಯುವಾಗಬಹುದು ..........ಅಲ್ಲವೇ?

1 comment:

  1. ಫಾಂಟ್ ಸ್ವಲ್ಪ ದೊಡ್ಡದಾಗಬೇಕು

    ReplyDelete